ಬೆಂಗಳೂರು : ದಕ್ಷಿಣ ಬೆಂಗಳೂರಿನಲ್ಲಿರುವ ಖಾಸಗಿ ಎಂಜಿನಿಯರಿಂಗ್ ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ಪುರುಷರ ಶೌಚಾಲಯದಲ್ಲಿ ತನ್ನ ಸಹಪಾಠಿಯ ಮೇಲೆ ಅತ್ಯಾಚಾರ ಆರೋಪದ ಮೇಲೆ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
3 ನೇ ವರ್ಷದ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿ ಜೀವನ್ ಗೌಡ ಬಂಧಿತ ಆರೋಪಿಯಾಗಿದ್ದಾನೆ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಅಕ್ಟೋಬರ್ 10 ರಂದು ನಡೆದಿದ್ದು, ಅದೇ ಕಾಲೇಜಿನಲ್ಲಿ ಏಳನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಸಂತ್ರಸ್ತೆ ಐದು ದಿನಗಳ ನಂತರ ಅಂದರೆ ಅಕ್ಟೋಬರ್ 15 ರಂದು ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿಗೆ ಪರಸ್ಪರ ಪರಿಚಯವಿತ್ತು. ಜೀವನ್ ಗೌಡ ಓದಿನಲ್ಲಿ ಹಿಂದುಳಿದಿದ್ದ ಎಂದು ವಿವರಿಸಲಾಗಿದೆ. ಘಟನೆ ನಡೆದ ದಿನ ಸಂತ್ರಸ್ತೆ ಕೆಲವು ವಸ್ತುಗಳನ್ನು ಸಂಗ್ರಹಿಸಲು ಜೀವನ್ ಗೌಡನನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ.
ಊಟದ ವಿರಾಮದ ಸಮಯದಲ್ಲಿ, ಜೀವನ್ ಆಕೆಗೆ ಹಲವು ಬಾರಿ ಕರೆ ಮಾಡಿ, ಏಳನೇ ಮಹಡಿಯಲ್ಲಿರುವ ಆರ್ಕಿಟೆಕ್ಚರ್ ಬ್ಲಾಕ್ ಬಳಿ ತನ್ನನ್ನು ಭೇಟಿಯಾಗುವಂತೆ ಕೇಳಿದ ಎಂದು ಆರೋಪಿಸಲಾಗಿದೆ. ಆಕೆ ಬಂದಾಗ, ಆಕೆಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆ ಲಿಫ್ಟ್ ಬಳಸಿ ಹೊರಡಲು ಪ್ರಯತ್ನಿಸುತ್ತಿದ್ದಾಗ, ಆರನೇ ಮಹಡಿವರೆಗೂ ಆಕೆಯನ್ನು ಹಿಂಬಾಲಿಸಿದ ಜೀವನ್ ಗೌಡ, ಪುರುಷರ ಶೌಚಾಲಯಕ್ಕೆ ಎಳೆದುಕೊಂಡು ಹೋಗಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.