ಬೆಂಗಳೂರು: ಇತ್ತೀಚೆಗೆ ಪಿಎಫ್ ಕಚೇರಿಗಳಲ್ಲಿ ಅಧಿಕಾರಿಗಳು ಗ್ರಾಹಕರಿಗೆ ಲಂಚ ನೀಡುವಂತೆ ಪೀಡಿಸುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಪಿಎಫ್ ಮೊತ್ತ ವಿತ್ ಡ್ರಾ ಸೇರಿ ಯಾವುದೇ ಸೇವೆಗಳನ್ನು ಪಡೆಯಲು ಗ್ರಾಹಕರು ಹೆಚ್ಚಾಗಿ ಪ್ರಾದೇಶಿಕ ಪಿಎಫ್ ಕಚೇರಿಗಳಿಗೆ ತೆರಳುತ್ತಾರೆ. ಆದರೆ, ಅಲ್ಲಿ ಅಧಿಕಾರಿಗಳು ಸೇವೆ ನೀಡಲು ಲಂಚ ಕೇಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಜನ ದೂರು ನೀಡಲು ವ್ಯವಸ್ಥೆ ಮಾಡಿದೆ.
ಹೌದು, ಪಿಎಫ್ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಕೇಳಿದರೆ ಗ್ರಾಹಕರು ಈಗ ದೂರು ನೀಡಬಹುದಾಗಿದೆ. ಆನ್ ಲೈನ್ ಮೂಲಕ ದೂರು ನೀಡುವವರು https://portal.cvc.gov.in ವೆಬ್ ಸೈಟ್ ಗೆ ತೆರಳಿ, ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ಅಧಿಕಾರಿಗಳ ವಿರುದ್ಧ ದೂರು ನೀಡಬಹುದಾಗಿದೆ.
ಆಫ್ ಲೈನ್ ಮೂಲಕವೂ ಇಪಿಎಫ್ ಸದಸ್ಯರು ದೂರು ನೀಡಬಹುದಾಗಿದೆ. ವಿಜಿಲೆನ್ಸ್ ಹೆಡ್ ಕ್ವಾರ್ಟರ್ಸ್, ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್, ಭವಿಷ್ಯ ನಿಧಿ ಭವನ್, 14, ಭಿಕಾಜಿ ಕಮಾ ಪ್ಯಾಲೇಸ್, ನವದೆಹಲಿ – 110026 ವಿಳಾಸಕ್ಕೆ ಪತ್ರ ಬರೆಯುವ ಮೂಲಕ ದೂರು ಸಲ್ಲಿಸಬಹುದು. ಹಾಗೆಯೇ, cvo@epfindia.gov.in ವಿಳಾಸಕ್ಕೆ ಇಮೇಲ್ ಮಾಡುವ ಮೂಲಕವೂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬಹುದಾಗಿದೆ.
ದೂರು ನೀಡುವವರು ಪ್ರಾದೇಶಿಕ ಕಚೇರಿ ವಿಳಾಸ, ಅಧಿಕಾರಿ ಕುರಿತ ಮಾಹಿತಿ ಸೇರಿ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ಇಪಿಎಫ್ಒ ತಿಳಿಸಿದೆ. ಗ್ರಾಹಕರು ನೀಡಿದ ದೂರಿನ ಆಧಾರದ ಮೇಲೆ ಲಂಚ ಕೇಳಿದ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆಲ ದಿನಗಳ ಹಿಂದಷ್ಟೇ ಒಡಿಶಾದ ಬೆಹ್ರಾಂಪುರದಲ್ಲಿರುವ ಪ್ರಾದೇಶಿಕ ಕಚೇರಿಯಲ್ಲಿ ಅಧಿಕಾರಿಯೊಬ್ಬ ವ್ಯಕ್ತಿಯಿಂದ 10 ಸಾವಿರ ರೂ. ಲಂಚ ಕೇಳಿದ ಕಾರಣ ಬಂಧಿಸಲಾಗಿತ್ತು.