ಹಾಸನ : ವರ್ಷಕ್ಕೊಮ್ಮೆ ಮಾತ್ರ ತೆರೆದಿರುವ ಪುರಾಣ ಪ್ರಸಿದ್ಧ ಹಾಸನಾಂಬೆ ದೇಗುಲಕ್ಕೆ ಕನ್ನಡ ಸಿನಿಮಾ ತಾರೆಯರು ಇಂದು ಭೇಟಿ ನೀಡಿದ್ದಾರೆ. ನಟಿ ಮಾಳವಿಕ, ಜಯಮಾಲ, ಶೃತಿ ಸೇರಿದಂತೆ ಕನ್ನಡದ ಹಲವು ನಟ-ನಟಿಯರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಸಾರ್ವಜನಿಕ ದರ್ಶನದ ಆರನೇ ದಿನ ದರ್ಶನಕ್ಕೆ ಆಗಮಿಸಿದ ಸಿನಿ ತಾರೆಯರು, ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬೆಯ ದರ್ಶನಕ್ಕೆ ಜೊತೆಯಾಗಿ ಆಗಮಿಸಿದ್ದಾರೆ.
ದೇವಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ: ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೆ ಯಾವುದೇ ಅನಾನುಕೂಲ ಆಗದಿರಲಿ ಎನ್ನುವ ಕಾರಣಕ್ಕೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗಾಗಿ ವಿಶೇಷ ಸಾಲು, ವಿಶೇಷ ದರ್ಶನಕ್ಕೆ ಹಣ ಕೊಟ್ಟು ಬರುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲು, ಹೀಗೆ ಯಾವ ಭಕ್ತರಿಗೂ ಸಮಸ್ಯೆ ಆಗದಂತೆ ದರ್ಶನ ಮಾಡಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ 15 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಮಾಡಿದ್ದು, ಈ ಬಾರಿಯೂ ಹೆಚ್ಚಿನ ಭಕ್ತವೃಂದ ಆಗಮಿಸುತ್ತಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ದೇವಾಲಯದ ಸುತ್ತಲು ಬ್ಯಾರಿಕೇಡ್ ಅಳವಡಿಕೆ, ಟೆಂಟ್ ನಿರ್ಮಾಣ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ವಾಟ್ಸ್ಆ್ಯಪ್ ಚಾಟ್ ಲಭ್ಯ : ದೇವಿಯ ಭಕ್ತರಿಗಾಗಿ ಆಡಳಿತ ಮಂಡಳಿ ವಾಟ್ಸ್ ಆ್ಯಪ್ ಚಾಟ್ ಮೂಲಕ ಆನ್ಲೈನ್ ನೆರವು ನೀಡುವ ಯೋಜನೆ ಹಮ್ಮಿಕೊಂಡಿದೆ. ಟಿಕೆಟ್ ಬುಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ, ಇ -ಹುಂಡಿ ಸೇರಿ ಹಲವು ಮಾಹಿತಿ ಆನ್ಲೈನ್ ಮೂಲಕ ಲಭ್ಯವಾಗಲಿದೆ. 6366105589 ನಂಬರ್ಗೆ ಮೆಸೇಜ್ ಮಾಡಿದರೆ ನಿಮ್ಮ ದರ್ಶನ ಯಾವ ದಿನ, ಎಷ್ಟು ಗಂಟೆಗೆ ದರ್ಶನ ಎನ್ನುವ ಮಾಹಿತಿಯೂ ಅಂತರ್ಜಾಲದಲ್ಲಿ ತಿಳಿಯಲಿದೆ.



















