ಮುಂಬೈ: ನಿಮ್ಮ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧದ 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನೀವೇಕೆ ಮಾಫಿ ಸಾಕ್ಷಿ ಆಗಬಾರದು?
ಇದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬಾಂಬೆ ಹೈಕೋರ್ಟ್ ಕೇಳಿರುವ ಪ್ರಶ್ನೆ. ವೃತ್ತಿಪರ ಕಾರ್ಯಕ್ರಮವೊಂದಕ್ಕಾಗಿ ಲಾಸ್ ಏಂಜಲೀಸ್‌ಗೆ ಪ್ರಯಾಣಿಸಲು ತಮ್ಮ ವಿರುದ್ಧ ಹೊರಡಿಸಲಾಗಿರುವ ಲುಕ್‌ಔಟ್ ಸರ್ಕ್ಯುಲರ್‌ಗೆ ತಾತ್ಕಾಲಿಕ ತಡೆ ನೀಡುವಂತೆ ಕೋರಿ ಶಿಲ್ಪಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಮಂಗಳವಾರ ಮೌಖಿಕವಾಗಿ ಈ ಪ್ರಶ್ನೆ ಕೇಳಿದೆ. ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಎ. ಅನ್ಖಾದ್ ಅವರಿದ್ದ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.
ನ್ಯಾಯಾಲಯದಲ್ಲಿ ನಡೆದಿದ್ದೇನು?
ಜನಪ್ರಿಯ ಯೂಟ್ಯೂಬರ್ ‘MrBeast’ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಈಗಾಗಲೇ ಪ್ರಯಾಣದ ಟಿಕೆಟ್‌ಗಳನ್ನು ಸಹ ಸ್ವೀಕರಿಸಲಾಗಿದೆ ಎಂದು ಶಿಲ್ಪಾ ಪರ ವಕೀಲರಾದ ನಿರಂಜನ್ ಮುಂಡರಗಿ ಮತ್ತು ಕೇರಳ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಅಕ್ಟೋಬರ್ 22 ರಿಂದ 27ರವರೆಗೆ ಐದು ದಿನಗಳ ಕಾಲ ಮಾತ್ರ ಪ್ರಯಾಣಿಸಲು ಉದ್ದೇಶಿಸಿದ್ದು, ಅವರ ಪುತ್ರ ಜೊತೆಗಿರುತ್ತಾನೆ. ಆದರೆ ಶಿಲ್ಪಾರ ತಾಯಿ ಮತ್ತು ಪುತ್ರಿ ಮುಂಬೈನಲ್ಲೇ ರಾಜ್ ಕುಂದ್ರಾ ಅವರೊಂದಿಗೆ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು. “ಅರ್ಜಿದಾರರಾದ ಶಿಲ್ಪಾ ಶೆಟ್ಟಿ ವಿರುದ್ಧ ಬೇರೆ ಯಾವುದೇ ಪ್ರಕರಣಗಳಿಲ್ಲ. ಅವರು ಮನರಂಜನಾ ಉದ್ಯಮದಲ್ಲಿದ್ದು, ಲಾಸ್ ಏಂಜಲೀಸ್‌ನಲ್ಲಿ ಶೂಟಿಂಗ್ ಇದೆ,” ಎಂದು ಮುಂಡರಗಿ ವಾದಿಸಿದರು.
ಆದರೆ, ದೂರುದಾರರ ಪರ ವಕೀಲರಾದ ಯೂಸುಫ್ ಇಕ್ಬಾಲ್ ಮತ್ತು ಝೈನ್ ಶ್ರಾಫ್ ಈ ಅರ್ಜಿಯನ್ನು ವಿರೋಧಿಸಿದರು. ಇದೇ ದಿನಾಂಕಗಳಂದು ಈ ಹಿಂದೆ ಶಿಲ್ಪಾ ಅವರು ಕೊಲಂಬೊಗೆ ವಿರಾಮಕ್ಕಾಗಿ ಪ್ರಯಾಣಿಸಲು ಅನುಮತಿ ಕೋರಿದ್ದರು. ಈಗ ಅದೇ ಪ್ರವಾಸವನ್ನು ವೃತ್ತಿಪರ ಎಂದು ಹೇಳುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ವೇಳೆ, ವೃತ್ತಿಪರ ಪ್ರವಾಸಕ್ಕೆ ಪೂರಕವಾಗಿ ಯಾವುದೇ ಔಪಚಾರಿಕ ಒಪ್ಪಂದ ಏಕೆ ಇಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಮುಂಡರಗಿ, ನ್ಯಾಯಾಲಯದಿಂದ ಪ್ರಯಾಣಕ್ಕೆ ಅನುಮತಿ ಸಿಗುವವರೆಗೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ವಿವರಿಸಿದರು.
ಆಗ ನ್ಯಾ.ಚಂದ್ರಶೇಖರ್, “ನೀವು ಮೊದಲನೇ ಆರೋಪಿ (ರಾಜ್ ಕುಂದ್ರಾ) ವಿರುದ್ಧ ಮಾಫಿ ಸಾಕ್ಷಿ (approver) ಏಕೆ ಆಗಬಾರದು?” ಎಂದು ಹಾಸ್ಯಭರಿತವಾಗಿ ಪ್ರಶ್ನಿಸಿದರು. ಇದಕ್ಕೆ ವಕೀಲ ಮುಂಡರಗಿ, “ನಾಳೆ ಪತ್ರಿಕೆಗಳು ಈ ಸಂಭಾಷಣೆಯನ್ನು ಕಳೆದ ಬಾರಿಯಂತೆ ಪ್ರಕಟಿಸುತ್ತವೆ,” ಎಂದು ತಮಾಷೆಯಾಗಿ ಉತ್ತರಿಸಿದರು. ಅದಕ್ಕೆ ಮುಖ್ಯ ನ್ಯಾಯಮೂರ್ತಿ, “ಹಾಗೆಯೇ ಆಗಲಿ,” ಎಂದು ಪ್ರತಿಕ್ರಿಯಿಸಿದರು.
ಅಪರಾಧ ಪ್ರಕರಣಗಳಲ್ಲಿ ಮಾಫಿ ಸಾಕ್ಷಿ ಎಂದರೆ, ಆರೋಪಿಯಾಗಿರುವ ವ್ಯಕ್ತಿಯು ಕ್ಷಮಾದಾನ ಅಥವಾ ಕಡಿಮೆ ಶಿಕ್ಷೆಯ ಬದಲಾಗಿ ಇತರ ಆರೋಪಿಗಳ ವಿರುದ್ಧ ಸಾಕ್ಷ್ಯ ಹೇಳಲು ಒಪ್ಪಿಕೊಳ್ಳುವುದು. ಸದ್ಯಕ್ಕೆ, ನ್ಯಾಯಾಲಯವು ಶಿಲ್ಪಾ ಅವರ ಪ್ರಯಾಣದ ಅರ್ಜಿಯನ್ನು ಬಾಕಿ ಇರಿಸಿದ್ದು, ಅಕ್ಟೋಬರ್ 16ರ ಗುರುವಾರದಂದು ಮತ್ತೆ ವಿಚಾರಣೆ ನಡೆಸಲಿದೆ.