ಹಾಸನ : ಅಯೋಧ್ಯೆಯ ರಾಮ ಮಂದಿರದಲ್ಲಿ ವಿರಾಜಿಸುತ್ತಿರುವ ರಾಮನ ಮೂರ್ತಿ ಕೆತ್ತನೆಯ ನಂತರ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಈಗ ಎಲ್ಲಾ ಕಡೆ ಜನಪ್ರಿಯರಾಗಿದ್ದಾರೆ. ಅವರ ಕಲೆ, ಪ್ರತಿಭೆ ಈಗ ಎಲ್ಲರಿಗೂ ಪರಿಚವಾಗಿದೆ.

ಹೀಗಿರುವಾಗ ಮುಂಬೈನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮನೆಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಗಣಪನ ಮೂರ್ತಿ ಶೀಘ್ರವೇ ವಿರಾಜಮಾನವಾಗಲಿದೆ.

ಹೌದು.. ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಕೆತ್ತನೆಯಾಗಿರುವಂತಹ ನಾಲ್ಕು ಅಡಿ, ಮೂರಡಿ ಪೀಠ ಉಳ್ಳ ಗಣಪನ ವಿಗ್ರಹ ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ಸಿದ್ದಪಡಿಸಲಾಗಿದೆ. ಕಳೆದ ಆರು ತಿಂಗಳಿಂದ ನಿರಂತರ ಗಣಪನ ವಿಗ್ರಹದ ಕೆತ್ತನೆ ಕಾರ್ಯ ನಡೆದಿದೆ. ಕೆತ್ತನೆಗೊಂಡಿರುವ ಈ ಗಣಪ ಇಂದೇ ಮುಂಬೈಗೆ ತೆರಳಲಿದ್ದು, ಅಲ್ಲಿ ಆಲಿಯಾ ಭಟ್ ಅವರ ಮನೆಯಲ್ಲಿ ವಿರಾಜಮಾನವಾಗಲಿದೆ.
ಆಲಿಯಾ ಭಟ್ ಅವರು ಅರುಣ್ ಯೋಗಿರಾಜ್ ಅವರ ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಕೆತ್ತನೆ ಗಮನಿಸಿ ಆ ಬಳಿಕ ತಮ್ಮ ಮನೆಗೆ ಗಣಪನ ಮೂರ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ನಮ್ಮನ್ನ ಮುಂಬೈಗೆ ಕರೆಸಿಕೊಂಡು ಮಾತನಾಡಿದ್ದರು. ನಾನು ಮನೆಯ ಸ್ಥಳ ಎಲ್ಲವನ್ನೂ ಗಮನಿಸಿ ಬಂದಿದ್ದೆ. ಇದೀಗ ಆ ಮನೆಗೆ ಹೊಂದಿಕೊಳ್ಳುವಂತೆ ಗಣಪ ಕೆತ್ತನೆ ಮಾಡಲಾಗಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಮಾಹಿತಿ ನೀಡಿದ್ದಾರೆ.