ಬೆಂಗಳೂರು : ಐಷಾರಾಮಿ ವಾಹನ ತಯಾರಕ ಮರ್ಸಿಡಿಸ್-ಬೆಂಝ್, ಇಂದು ಭಾರತದ ಮಾರುಕಟ್ಟೆಗೆ ತನ್ನ ಹೊಚ್ಚಹೊಸ G 450d ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನ ಮೂಡಿಸಿದೆ. ಇದರೊಂದಿಗೆ, ಇದೇ ಮೊದಲ ಬಾರಿಗೆ, ಭಾರತದಲ್ಲಿನ ಗ್ರಾಹಕರಿಗೆ ಮರ್ಸಿಡಿಸ್-ಬೆಂಝ್‌ನ ಐಕಾನಿಕ್ G-ಕ್ಲಾಸ್ ಎಸ್‌ಯುವಿ ಸರಣಿಯು ಡೀಸೆಲ್, ಪೆಟ್ರೋಲ್, ಮತ್ತು ಎಲೆಕ್ಟ್ರಿಕ್ ಎಂಬ ಮೂರೂ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಾದಂತಾಗಿದೆ. ಹೊಸ G 450d, ಮರ್ಸಿಡಿಸ್-ಬೆಂಝ್‌ನ ಅತ್ಯಂತ ಶಕ್ತಿಶಾಲಿ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ 2.90 ಕೋಟಿ ರೂಪಾಯಿ ಆಗಿದೆ. ಮೊದಲ ಹಂತದಲ್ಲಿ ಕೇವಲ 50 ವಿಶೇಷ ಯುನಿಟ್‌ಗಳನ್ನು ಮಾತ್ರ ಭಾರತೀಯ ಮಾರುಕಟ್ಟೆಗೆ ಹಂಚಿಕೆ ಮಾಡಲಾಗಿದೆ.
“ಅಪ್ರತಿಮ ಕಾರ್ಯಕ್ಷಮತೆ ಮತ್ತು ದೈತ್ಯ ಶಕ್ತಿ”
ಹೊಸ G 450d ತನ್ನ 3.0-ಲೀಟರ್ ಇನ್‌ಲೈನ್ 6-ಸಿಲಿಂಡರ್ ಡೀಸೆಲ್ ಎಂಜಿನ್ ನಿಂದಾಗಿ ಅದ್ಭುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಎಂಜಿನ್ 367 ಅಶ್ವಶಕ್ತಿ ಮತ್ತು 750 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 48V ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವೂ ಇದ್ದು, ಇದು ಹೆಚ್ಚುವರಿಯಾಗಿ 15 kW ಎಲೆಕ್ಟ್ರಿಕ್ ನೆರವು ನೀಡುತ್ತದೆ. ಈ ಶಕ್ತಿಯುತ ಎಂಜಿನ್‌ನಿಂದಾಗಿ, ಈ ದೈತ್ಯ ಎಸ್‌ಯುವಿ ಕೇವಲ 5.8 ಸೆಕೆಂಡ್‌ಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ತಲುಪಬಲ್ಲದು ಮತ್ತು ಗಂಟೆಗೆ ಗರಿಷ್ಠ 210 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು. ಈ ಕುರಿತು ಮಾತನಾಡಿದ ಮರ್ಸಿಡಿಸ್-ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್, “ಹೊಸ G 450d, G-ಕ್ಲಾಸ್‌ನಲ್ಲಿ ಡೀಸೆಲ್ ಪವರ್‌ಟ್ರೇನ್‌ಗೆ ಇರುವ ನಿರಂತರ ಬೇಡಿಕೆಯನ್ನು ಪುನರುಚ್ಚರಿಸುತ್ತದೆ” ಎಂದು ಹೇಳಿದ್ದಾರೆ.

“ಆಫ್-ರೋಡ್ ಸಾಮರ್ಥ್ಯದಲ್ಲಿ ರಾಜ”
G-ಕ್ಲಾಸ್‌ನ ದಂತಕಥೆಯಾಗಿರುವ ಆಫ್-ರೋಡ್ ಸಾಮರ್ಥ್ಯವನ್ನು G 450d ಸಹ ಉಳಿಸಿಕೊಂಡಿದೆ. ಇದು 241 ಮಿಲಿಮೀಟರ್ ಗ್ರೌಂಡ್ ಕ್ಲಿಯರೆನ್ಸ್, 70 ಸೆಂಟಿಮೀಟರ್ ಆಳದ ನೀರಿನಲ್ಲಿ ಚಲಿಸುವ ಸಾಮರ್ಥ್ಯ, ಮತ್ತು 100% ಗ್ರೇಡಿಯಬಿಲಿಟಿಯನ್ನು ಹೊಂದಿದೆ. ಲ್ಯಾಡರ್-ಫ್ರೇಮ್ ಚಾಸಿಸ್, ಮೂರು ಮೆಕ್ಯಾನಿಕಲ್ ಡಿಫರೆನ್ಷಿಯಲ್ ಲಾಕ್‌ಗಳು, ಮತ್ತು ಸ್ವತಂತ್ರ ಮುಂಭಾಗದ ಸಸ್ಪೆನ್ಷನ್‌ನೊಂದಿಗೆ, ಯಾವುದೇ ಕಠಿಣ ಭೂಪ್ರದೇಶದಲ್ಲಿಯೂ G 450d ರಾಜನಂತೆ ಸಾಗುತ್ತದೆ.
“ಐಷಾರಾಮಿ ಒಳಾಂಗಣ ಮತ್ತು ತಂತ್ರಜ್ಞಾನ”
ವಾಹನದ ಒಳಾಂಗಣದಲ್ಲಿ ಐಷಾರಾಮಿತನ ಮತ್ತು ತಂತ್ರಜ್ಞಾನದ ಸಮಾಗಮವಿದೆ. ಆಗ್ಮೆಂಟೆಡ್ ರಿಯಾಲಿಟಿ ನ್ಯಾವಿಗೇಷನ್‌ನೊಂದಿಗೆ ಇತ್ತೀಚಿನ MBUX NTG7 ಸಿಸ್ಟಮ್, ಎರಡು-ಬಣ್ಣದ ನಪ್ಪಾ ಲೆದರ್ ಸೀಟ್‌ಗಳು, ಮತ್ತು ಡಾಲ್ಬಿ ಅಟ್ಮೋಸ್‌ನೊಂದಿಗೆ ಬರ್ಮೆಸ್ಟರ್® 3D ಸರೌಂಡ್ ಸೌಂಡ್ ಸಿಸ್ಟಮ್ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಜೊತೆಗೆ, ಆಫ್-ರೋಡ್ ಕಾರ್ಯಗಳನ್ನು ಸುಲಭವಾಗಿ ಪ್ರವೇಶಿಸಲು ಹೊಸ ಡಿಸ್‌ಪ್ಲೇ ಮತ್ತು ಸುಧಾರಿತ ADAS ತಂತ್ರಜ್ಞಾನ ಪ್ಯಾಕೇಜ್ ಅನ್ನು ಸಹ ನೀಡಲಾಗಿದೆ.
“G-ಟ್ರೈಬ್ ಎಸ್ಕೇಪೇಡ್ಸ್’ಗೆ ಚಾಲನೆ”
ಈ ಬಿಡುಗಡೆಯ ಜೊತೆಗೆ, ಮರ್ಸಿಡಿಸ್-ಬೆಂಝ್ ಆಯ್ದ ಗ್ರಾಹಕರಿಗಾಗಿ ‘G-ಟ್ರೈಬ್ ಎಸ್ಕೇಪೇಡ್ಸ್’ ಎಂಬ ವಿಶೇಷ ಎಸ್‌ಯುವಿ ಡ್ರೈವ್ ಅನುಭವ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು G-ಕ್ಲಾಸ್‌ನ ಸಾಹಸಮಯ ಸ್ಫೂರ್ತಿಯಿಂದ ಪ್ರೇರಿತವಾಗಿದೆ.