ಬೆಂಗಳೂರು : ಕರ್ನಾಟಕದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗಿದೆ. ಹಬ್ಬದ ಖರೀದಿ ಕೂಡ ಜೋರಾಗಿದೆ. ಇನ್ನು ಬೆಂಗಳೂರಿನಲ್ಲಿರುವವರು ತಮ್ಮ ಊರಿಗೆ ಹೋಗಿ ಸಡಗರದಿಂದ ಹಬ್ಬವನ್ನು ಆಚರಿಸಲು ಸಿದ್ಧರಾಗಿದ್ದಾರೆ. ಇದರ ಬೆನ್ನಲ್ಲೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಹಬ್ಬಕ್ಕಾಗಿ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಹೆಚ್ಚುವರಿಯಾಗಿ 2,500 ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿದೆ. ಹಾಗೆಯೇ, ಟಿಕೆಟ್ ಬುಕ್ಕಿಂಗ್ ಮೇಲೆ ಶೇ.5-10ರಷ್ಟು ರಿಯಾಯಿತಿಯನ್ನೂ ಘೋಷಣೆ ಮಾಡಿದೆ.
ಮೆಜೆಸ್ಟಿಕ್, ಸ್ಯಾಟಲೈಟ್ ಹಾಗೂ ಶಾಂತಿನಗರ ಬಸ್ ನಿಲ್ದಾಣದಿಂದ 2,500 ಬಸ್ ಗಳು ಬೇರೆ ಬೇರೆ ಭಾಗಗಳಿಗೆ ಸಂಚರಿಸುತ್ತವೆ. ಯಾವ ಬಸ್ ನಿಲ್ದಾಣದಿಂದ ಎಲ್ಲಿಗೆ ಬಸ್ ಗಳು ಸಂಚರಿಸುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಮೆಜೆಸ್ಟಿಕ್ : ಕೆಂಪೇಗೌಡ ಬಸ್ ನಿಲ್ದಾಣ ಅಥವಾ ಮೆಜೆಸ್ಟಿಕ್‌ನಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿ ಹಲವು ಸ್ಥಳಗಳಿಗೆ ಸಂಚರಿಸಬಹುದು.
ಮೈಸೂರು ರಸ್ತೆ ಬಸ್ ನಿಲ್ದಾಣ (ಸ್ಯಾಟಲೈಟ್) : ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಕಡೆಗೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಂಚರಿಸಬಹುದು.
ಶಾಂತಿನಗರ ಬಸ್ ನಿಲ್ದಾಣ : ತಮಿಳುನಾಡಿನ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚ್ಚಿ ಮತ್ತು ಕೇರಳದ ಪಾಲಕ್ಕಾಡ್, ತ್ರಿಶ್ಶೂರ್, ಎರ್ನಾಕುಲಂ, ಕಲ್ಲಿಕೋಟೆಗೆ ಇಲ್ಲಿಂದ ತೆರಳಬಹುದು.
ಬುಕ್ಕಿಂಗ್ ಹೇಗೆ? ಡಿಸ್ಕೌಂಟ್ ಪಡೆಯೋದು ಹೇಗೆ?
ಆನ್ ಲೈನ್ ಮೂಲಕ www.ksrtc.karnataka.gov.in ಗೆ ಭೇಟಿ ನೀಡಿ ಟಿಕೆಟ್ ಗಳನ್ನು ಬುಕ್ ಮಾಡಬಹುದು. ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಬುಕ್ ಮಾಡಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ರೌಂಡ್ ಟ್ರಿಪ್ ಅಂದರೆ, ಹೋಗಿ ಬರುವ ಟಿಕೆಟ್ ಬುಕ್ ಮಾಡಿದರೆ ಪ್ರತಿ ಟಿಕೆಟ್ ಗೆ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ.