ಶರ್ಮ್ ಎಲ್-ಶೇಖ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲಿಕ ಶಾಂತಿ ಸಾಧಿಸುವ ಗುರಿಯೊಂದಿಗೆ ಈಜಿಪ್ಟ್‌ನಲ್ಲಿ ನಡೆದ ಗಾಜಾ ಶಾಂತಿ ಶೃಂಗಸಭೆಯ ಅಂಗಳದಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತು ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ನಡುವೆ ನಡೆದ ಹಾಸ್ಯಾಸ್ಪದ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಮಾನದಿಂದ ಇಳಿಯುವ ಹೊತ್ತಲ್ಲೇ ಅಲ್ಲೇ ಇದ್ದ ಮೆಲೋನಿ ಅವರನ್ನು ಮಾತನಾಡಿಸಿದ ಟರ್ಕಿಯ ಎರ್ಡೋಗನ್ ಅವರು, “ನೀವು ಹೇಗಿದ್ದೀರಿ, ಚೆನ್ನಾಗಿದ್ದೀರಾ? ಮೊದಲು ನಿಮ್ಮ ಧೂಮಪಾನವನ್ನು ಬಿಡಿಸಬೇಕು” ಎಂದು ಹೇಳಿದ್ದಾರೆ. ಈ ಕ್ಷಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೇಳೆ ಪಕ್ಕದಲ್ಲೇ ಇದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ನಗುತ್ತಾ “ಅದು ಅಸಾಧ್ಯ!” ಎಂದು ಹೇಳಿದ್ದಾರೆ. ಮೆಲೋನಿ ತಕ್ಷಣ ಪ್ರತಿಕ್ರಿಯಿಸಿ, “ಗೊತ್ತಿದೆ, ಗೊತ್ತಿದೆ ಬಿಡುತ್ತೇನೆ. ಆದರೆ, ಅದನ್ನು ಬಿಟ್ಟರೆ ನನ್ನ ವರ್ತನೆಯಲ್ಲಿ ದೊಡ್ಡಮಟ್ಟಿನ ಬದಲಾವಣೆ ಆಗಬಹುದು, ನಾನು ಯಾರನ್ನೂ ಕೊಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ” ಎಂದಿದ್ದಾರೆ.
ಮೆಲೋನಿಯ ಧೂಮಪಾನ ಚಟದ ಕುರಿತು ಒಬ್ಬ ಲೇಖಕರಿಗೆ ನೀಡಿದ್ದ ಸಂದರ್ಶನಾಧಾರಿತ ಪುಸ್ತಕದಲ್ಲೂ, ಟುನೀಶಿಯಾ ಅಧ್ಯಕ್ಷ ಕೈಸ್ ಸಯೀದ್ ಸೇರಿದಂತೆ ವಿದೇಶಿ ನಾಯಕರೊಂದಿಗೆ ‘ಸಂಬಂಧ ಬೆಸೆಯಲು’ ಧೂಮಪಾನ ಕೆಲವೊಮ್ಮೆ ನೆರವಾದುದಾಗಿ ಅವರು ಒಪ್ಪಿಕೊಂಡಿದ್ದರು. ಮತ್ತೊಂದೆಡೆ, ಟರ್ಕಿಯೊಳಗೆ ಎರ್ಡೊಗನ್ “ಸ್ಮೋಕ್-ಫ್ರೀ ತುರಕೀಯೆ”(ಧೂಮಪಾನ ಮುಕ್ತ ಟರ್ಕಿ) ಅಭಿಯಾನ ನಡೆಸುತ್ತಿದ್ದು, 2024-2028 ಅವಧಿಗೆ ಜಾಗೃತಿಯೊಡನೆ ತ್ಯಜನೆಗೆ ಬೆಂಬಲ ಹಾಗೂ ಯುವಜನರನ್ನು ತಂಬಾಕುವಿನಿಂದ ದೂರ ಇಡುವ ಕಾರ್ಯಯೋಜನೆ ರೂಪಿಸಿದ್ದಾರೆ.