ಟೆಲ್ ಅವೀವ್/ಕಠ್ಮಂಡು: ಗಾಜಾ-ಇಸ್ರೇಲ್ ಶಾಂತಿ ಒಪ್ಪಂದದಂತೆ ಹಲವು ಒತ್ತೆಯಾಳುಗಳು-ಯುದ್ಧಕೈದಿಗಳ ಬಿಡುಗಡೆಯಾಗುತ್ತಿರುವಂತೆಯೇ ನೋವಿನ ಸುದ್ದಿಯೊಂದು ಹೊರಬಿದ್ದಿದೆ. 2023ರ ಅ. 7ರಂದು ಹಮಾಸ್ ದಾಳಿಯ ಸಮಯದಲ್ಲಿ ಅಪಹರಿಸಲ್ಪಟ್ಟ ನೇಪಾಳದ ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿ ಕೂಡ ಹಮಾಸ್ ವಶದಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಅವರ ದೇಹವನ್ನು ಹಮಾಸ್ ಉಗ್ರರು ಇಸ್ರೇಲ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ನೇಪಾಳದ ಇಸ್ರೇಲ್ ರಾಯಭಾರಿ ಧನ್ ಪ್ರಸಾದ್ ಪಂಡಿತ್ ಅವರು ಜೋಶಿಯ ಅವಶೇಷಗಳು ಟೆಲ್ ಅವೀವ್‌ಗೆ ಸಾಗಿಸಿರುವುದನ್ನು ದೃಢಪಡಿಸಿದ್ದಾರೆ. ಇಸ್ರೇಲ್ ಸೇನೆಯ ವಕ್ತಾರ ಎಫ್ಫಿ ಡೆಫ್ರಿನ್ ಅವರೂ, ಜೋಶಿಯದ್ದೂ ಸೇರಿದಂತೆ ನಾಲ್ವರು ಬಂಧಿತರ ದೇಹಗಳು ಇಸ್ರೇಲ್ ವಶಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಗುರುತಿನ ದೃಢೀಕರಣಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಸಿ, ನೇಪಾಳ ರಾಯಭಾರಿ ಕಚೇರಿಯೊಡನೆ ಸಂಯೋಜನೆ ಮಾಡಿಕೊಂಡು ಇಸ್ರೇಲ್‌ನಲ್ಲೇ ಅಂತ್ಯಕ್ರಿಯೆ ನಡೆಸಿದ ಬಳಿಕ ಅವಶೇಷಗಳನ್ನು ನೇಪಾಳಕ್ಕೆ ಕಳುಹಿಸಲಾಗುವುದು ಎಂದೂ ಹೇಳಿದ್ದಾರೆ.
ಬಿಪಿನ್ ಜೋಶಿ 2023ರ ಸೆಪ್ಟೆಂಬರ್‌ನಲ್ಲಿ ಗಾಜಾ ಗಡಿಯ ಸಮೀಪದ ಕಿಬ್ಬೂಟ್ಸ್ ಅಲೂಮೀಮ್‌ನಲ್ಲಿ 16 ಸಹಪಾಠಿಗಳೊಂದಿಗೆ ಇಸ್ರೇಲಿ ಕೃಷಿ ಪದ್ಧತಿಗಳಲ್ಲಿ ತರಬೇತಿ ಪಡೆಯಲು ‘ಅಧ್ಯಯನ ಮತ್ತು ಕೆಲಸ’ ಯೋಜನೆಯಡಿ ಇಸ್ರೇಲ್‌ಗೆ ತೆರಳಿದ್ದರು. ಅಕ್ಟೋಬರ್ 7ರ ಬೆಳಗ್ಗೆ ಹಮಾಸ್ ಭೀಕರ ದಾಳಿ ಆರಂಭಿಸಿದಾಗ ವಿದ್ಯಾರ್ಥಿಗಳು ಶೆಲ್ಟರ್‌ನಲ್ಲಿ ಅಡಗಿಕೊಂಡಿದ್ದರು. ಆತಂಕದ ಮಧ್ಯೆ ಒಳಗೆ ಎಸೆದ ಎರಡನೇ ಗ್ರೆನೇಡ್ ಅನ್ನು ಜೋಶಿ ತಕ್ಷಣ ಹಿಡಿದು ಹೊರಗೆ ಎಸೆದು ಸಹಪಾಠಿಗಳ ಜೀವ ಉಳಿಸಿ ಧೈರ್ಯ ತೋರಿದ್ದರು. ಇದಾದ ನಂತರ ಅವರನ್ನು ಹಮಾಸ್ ಶಸ್ತ್ರಧಾರಿಗಳು ಅಪಹರಿಸಿ ಗಾಜಾಕ್ಕೆ ಕೊಂಡೊಯ್ದರು. ಬಳಿಕ ಹೊರಬಂದ ವಿಡಿಯೋ ದೃಶ್ಯಗಳಲ್ಲಿ ಅವರನ್ನು ಗಾಜಾದ ಶಿಫಾ ಆಸ್ಪತ್ರೆಯೊಳಗೆ ಎಳೆದುಕೊಂಡು ಹೋಗುತ್ತಿರುವುದು ಕಾಣಿಸಿಕೊಂಡಿತ್ತು. ಅದು ಅವರು ಜೀವಂತವಾಗಿ ಕಂಡ ಕೊನೆಯ ದೃಶ್ಯ.
ಅಕ್ಟೋಬರ್ 26ರಂದು ಬಿಪಿನ್ ಜೋಶಿ ಅವರಿಗೆ 25ನೇ ಹುಟ್ಟುಹಬ್ಬ. ಅವರ ತಾಯಿ ಹಾಗೂ ತಂಗಿ ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ಮತ್ತು ಅಮೆರಿಕ ಸೇರಿ ಇನ್ನಿತರ ದೇಶಗಳಿಗೆ ತೆರಳಿ ಅವರ ಬಿಡುಗಡೆಗಾಗಿ ಬಹಳಷ್ಟು ಪ್ರಯತ್ನ ನಡೆಸಿ ವಿಫಲರಾಗಿದ್ದರು. ಆದರೆ, ಕೊನೆಗೂ ಜೋಶಿ ಬದುಕುಳಿಯಲಿಲ್ಲ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಸೋಮವಾರವಷ್ಟೇ ಹಮಾಸ್ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.