ನವದೆಹಲಿ: ಟೀಂ ಇಂಡಿಯಾದ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಬಗ್ಗೆ ಆಗಾಗ ಕೇಳಿಬರುತ್ತಿದ್ದ ಟೀಕೆಗಳಿಗೆ, ಅವರೇ ಮೈದಾನದ ಹೊರಗೆ ಬ್ಯಾಟ್ ಬೀಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ಸಜ್ಜಾಗುತ್ತಿರುವ ರೋಹಿತ್, ಬರೋಬ್ಬರಿ 10 ಕೆ.ಜಿ ತೂಕ ಇಳಿಸಿಕೊಂಡು ಸಖತ್ ಫಿಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದಾರೆ.
ಈ ಅದ್ಭುತ ಬದಲಾವಣೆಯು, 2011ರ ವಿಶ್ವಕಪ್ ತಂಡದಿಂದ ಕೈಬಿಟ್ಟಾಗ ರೋಹಿತ್ ಶರ್ಮಾ ತೋರಿದ್ದ ಅದೇ ಛಲ ಮತ್ತು ಬದ್ಧತೆಯನ್ನು ನೆನಪಿಸುತ್ತಿದೆ ಎಂದು ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಶ್ಲಾಘಿಸಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಕಾಣಿಸಿಕೊಂಡ 38 ವರ್ಷದ ರೋಹಿತ್, ಹಿಂದೆಂದಿಗಿಂತಲೂ ಹೆಚ್ಚು ತೆಳ್ಳಗೆ ಮತ್ತು ಫಿಟ್ ಆಗಿ ಕಾಣುವ ಮೂಲಕ ಅಚ್ಚರಿ ಮೂಡಿಸಿದ್ದರು.
“2011ರ ವಿಶ್ವಕಪ್‌ನಿಂದ ಹೊರಗುಳಿದಿದ್ದು ರೋಹಿತ್ ಹೃದಯಕ್ಕೆ ಆಳವಾದ ಗಾಯ ಮಾಡಿತ್ತು. ಆ ನಂತರ ಅವರು ಫಿಟ್‌ನೆಸ್ ಬಗ್ಗೆ ತೋರಿದ್ದ ಕಠಿಣ ಪರಿಶ್ರಮವನ್ನೇ, ನಾವು ಈಗ ಮತ್ತೆ ನೋಡುತ್ತಿದ್ದೇವೆ. ಕಳೆದ ಹಲವು ವರ್ಷಗಳಿಂದ ಅವರ ಫಿಟ್‌ನೆಸ್ ಬಗ್ಗೆ ಬಂದ ಟೀಕೆಗಳು ಅವರ ಮನಸ್ಸಿನಲ್ಲಿ ಉಳಿದಿದ್ದವು. ಈಗ ಅವರು ಅದಕ್ಕೆ ಉತ್ತರ ನೀಡಲು ಕಷ್ಟಪಟ್ಟಿದ್ದಾರೆ,” ಎಂದು ಸಂಜಯ್ ಬಂಗಾರ್ ‘ಸ್ಟಾರ್ ಸ್ಪೋರ್ಟ್ಸ್’ಗೆ ತಿಳಿಸಿದ್ದಾರೆ.
“ಕಠಿಣ ತರಬೇತಿ”
ರೋಹಿತ್ ಶರ್ಮಾ ಅವರ ಆಪ್ತ ಅಭಿಷೇಕ್ ನಾಯರ್ ಅವರ ಮಾರ್ಗದರ್ಶನದಲ್ಲಿ, ಕಳೆದ ಒಂದು ತಿಂಗಳಿನಿಂದ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಅವರ ತೀವ್ರವಾದ ಜಿಮ್ ಸೆಷನ್‌ಗಳು ಮತ್ತು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಸಿದ ಬ್ಯಾಟಿಂಗ್ ಅಭ್ಯಾಸದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “ರೋಹಿತ್ ಮತ್ತೆ ಹಸಿದು, ಫಿಟ್ ಆಗಿರುವುದು ನೋಡಲು ಸಂತೋಷವಾಗುತ್ತಿದೆ. ನಾಯಕನಾಗಿ, ಬೌಂಡರಿ ಲೈನ್‌ನಲ್ಲಿ ಓಡಾಡಿ, ಡೈವ್ ಹೊಡೆದು, ಫೀಲ್ಡಿಂಗ್‌ನಲ್ಲಿ ಸ್ಫೂರ್ತಿ ತುಂಬಬೇಕಾಗುತ್ತದೆ. ರೋಹಿತ್ ಆ ಸವಾಲಿಗೆ ಸಂಪೂರ್ಣವಾಗಿ ಸಿದ್ಧರಾಗುತ್ತಿದ್ದಾರೆ,” ಎಂದು ಬಂಗಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಂಡಕ್ಕೆ ಮರಳಿದ್ದು, ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು, ಈ ಇಬ್ಬರೂ ಹಿರಿಯ ಆಟಗಾರರ ಫಿಟ್‌ನೆಸ್ ಮತ್ತು ಪ್ರದರ್ಶನವು ನಿರ್ಣಾಯಕವಾಗಲಿದೆ.