ಚೆನ್ನೈ : ತಮಿಳುನಾಡಿನ ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ. ತನಿಖೆಯ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ಸಹ ರಚಿಸಲಾಗಿದೆ. ಜತೆಗೆ, ದುರಂತವು “ದೇಶವನ್ನೇ ಬೆಚ್ಚಿಬೀಳಿಸಿದೆ” ಎಂದು ಹೇಳಿದೆ.
ತಮಿಳುನಾಡಿನ ಕರೂರ್‌ನಲ್ಲಿ ಕಳೆದ ತಿಂಗಳು ನಟ-ರಾಜಕಾರಣಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರ ಸಾರ್ವಜನಿಕ ಕಾರ್ಯಕ್ರಮದ ವೇಳೆ ನಡೆದ ಕಾಲ್ತುಳಿತ ದುರಂತ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ನಡೆಸುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ಆದೇಶಿಸಿದೆ. ತನಿಖೆಯ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನೂ ನೇಮಿಸಿದೆ. ಈ ಸಮಿತಿಯಲ್ಲಿ ತಮಿಳುನಾಡು ಕೇಡರ್‌ನ ಇಬ್ಬರು ಐಪಿಎಸ್ ಅಧಿಕಾರಿಗಳು ಇರಲಿದ್ದು, ಅವರು ರಾಜ್ಯದ ಸ್ಥಳೀಯರಾಗಿರಬಾರದು ಎಂದು ಸೂಚಿಸಲಾಗಿದೆ.
ಈ ಹಿಂದೆ ಸಿಬಿಐ ತನಿಖೆಯನ್ನು ನಿರಾಕರಿಸಿದ್ದ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠದ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ಈ ಕಾಲ್ತುಳಿತವನ್ನು “ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ” ಎಂದು ಬಣ್ಣಿಸಿದೆ.
ದುರಂತಕ್ಕೆ ಕಾರಣವಾದ ಅಂಶಗಳು : ಸೆ.27ರಂದು ವಿಜಯ್ ಅವರ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಧಿಕಾರಿಗಳ ಪ್ರಕಾರ, ಸುಮಾರು 10,000 ಜನರ ಸಾಮರ್ಥ್ಯವಿದ್ದ ಸ್ಥಳದಲ್ಲಿ 30,000ಕ್ಕೂ ಹೆಚ್ಚು ಜನರು ಸೇರಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ. ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿತ್ತು ಮತ್ತು ಆಹಾರ ಹಾಗೂ ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇರಲಿಲ್ಲ. ಮಧ್ಯಾಹ್ನ 12 ಗಂಟೆಗೆ ಸ್ಥಳಕ್ಕೆ ಬರಬೇಕಿದ್ದ ವಿಜಯ್, ಸಂಜೆ 7 ಗಂಟೆಗೆ ಆಗಮಿಸಿದ್ದರು. ಅವರು ಬರುವಷ್ಟರಲ್ಲಿ ಜನಸಂದಣಿ ಹೆಚ್ಚಾಗಿತ್ತು.
ಈ ವೇಳೆ, ಅನೇಕರು ಮರಗಳು, ಕಟ್ಟಡಗಳ ಮೇಲ್ಛಾವಣಿ ಮತ್ತು ವಿದ್ಯುತ್ ಕಂಬಗಳನ್ನು ಹತ್ತಿದ್ದರು. ವಿದ್ಯುತ್ ಅವಘಡಗಳನ್ನು ತಪ್ಪಿಸಲು ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ವಿಜಯ್ ಆಗಮಿಸುತ್ತಿದ್ದಂತೆ, ಅವರ ಗಮನ ಸೆಳೆಯಲು ಜನರು ಪರಸ್ಪರ ತಳ್ಳಾಡಿ, ಪ್ರಚಾರ ವಾಹನದತ್ತ ಚಪ್ಪಲಿಗಳನ್ನು ಎಸೆದರು. ಈ ಗದ್ದಲದಲ್ಲಿ ಅನೇಕರು ಮೂರ್ಛೆ ಹೋದರು. ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು ಎಂದು ಹೇಳಲಾಗಿದೆ.
ಘಟನೆಯ ಮರುದಿನ, ವಿಜಯ್ ಅವರು ಮೃತರ ಪ್ರತಿ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರು. ಅಲ್ಲದೆ, ತಮ್ಮ ರಾಜ್ಯಾದ್ಯಂತದ ಪ್ರವಾಸವನ್ನು ಸ್ಥಗಿತಗೊಳಿಸಿದ್ದರು. ಅಕ್ಟೋಬರ್ 7 ರಂದು ವಿಡಿಯೋ ಕಾಲ್ ಮೂಲಕ ಮೃತರ ಕುಟುಂಬಗಳೊಂದಿಗೆ ಮಾತನಾಡಿರುವ ಅವರು, ಶೀಘ್ರದಲ್ಲೇ ಕರೂರ್‌ಗೆ ಭೇಟಿ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ದುರಂತಕ್ಕೆ ಹಲವು ಲೋಪಗಳೇ ಕಾರಣ ಎಂದು ಆರೋಪಿಸಿ ಈಗಾಗಲೇ ಟಿವಿಕೆ ಕರೂರು ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತ್ತಿಯಳಗನ್ ಅವರನ್ನು ಬಂಧಿಸಲಾಗಿದೆ. ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಶೇಖರ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರಿಬ್ಬರೂ ತಲೆಮರೆಸಿಕೊಂಡಿದ್ದಾರೆ.



















