ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಪಟ್ಟಣ ಪಂಚಾಯತಿ ರದ್ಧತಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದು, ಇಂದಿಗೆ 21 ದಿನಗಳು ಕಳೆದಿವೆ. ದಿನಕ್ಕೊಂದು ಗ್ರಾಮವನ್ನು ನಿಗದಿಪಡಿಸಿ, ರೈತ ಭಾಂದವರು ತಮಗಾದ ಅನ್ಯಾಯದ ವಿರುದ್ಧ ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ.
ರೈತರ ಹೋರಾಟದ 21ನೇ ದಿನವಾದ ಇಂದು(ಆದಿತ್ಯವಾರ) ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಆಗಮಿಸಿ ರೈತರಿಗೆ ಆಶ್ವಾಸನೆಯನ್ನು ನೀಡಿದ್ದಾರೆ.
ಹೋರಾಟನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ ಭಂಡಾರಿ, “ನಾನು ಇಷ್ಟು ದಿನ ಬರದೇ ಇರಲೂ ಕಾರಣ ನನಗೆ ಸುಳ್ಳು ಭರವಸೆಗಳನ್ನು ನೀಡಲು ಇಷ್ಟವಿರಲಿಲ್ಲ. ಈ ವಿಷಯದಲ್ಲಿ ನನಗಿಂತ ಜಾಸ್ತಿ ಸ್ಥಳೀಯ ತಹಶೀಲ್ದಾರ್, ಎಸಿ ಹಾಗೂ ಡಿಸಿ ಯವರ ಪಾತ್ರ ಹೆಚ್ಚಿದೆ. ಅವರು ಉತ್ತಮವಾದ ರಿಪೋರ್ಟ್ ಮಾಡಿ ಕೊಟ್ಟರೆ ಅದರ ಮೇಲೆ ನಾನು ಪ್ರಯತ್ನಿಸುವೆ ಎಂದು ಹೇಳಿದ್ದಲ್ಲದೇ, ಈ ಕುರಿತಾಗಿ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದೇನೆ, ಸಂಜೆ ಒಳಗೆ ರಿಪೋರ್ಟ್ ಕೊಡುವುದಾಗಿ ಹೇಳಿದ್ದಾರೆ. ನಾನು ಬುಧವಾರದ ದಿನ ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳ ಜೊತೆ ಮಾತನಾಡಿ, ನ್ಯಾಯ ಒದಗಿಸುವುದಕ್ಕೆ ನನ್ನ ಪ್ರಾಮಾಣಿಕ ಪ್ರಯತ್ನ ಖಂಡಿತ ಮಾಡುತ್ತೇನೆ” ಎಂದು ಭರವಸೆಯನ್ನು ನೀಡಿದ್ದಾರೆ.

