ಉಡುಪಿ/ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ವಾರದ ಹಿಂದೆ ಮಹಿಳೆಯೋರ್ವರ ಕರಿಮಣಿ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಂಜಯ್ ಎಲ್(33) ಹಾಗೂ ದಾವಣಗೆರೆಯ ವಿನೋಬನಗರದ ವಸಂತ್ ಕುಮಾರ್ (30) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 3ಲಕ್ಷ ಮೌಲ್ಯದ ಕರಿಮಣಿ ಸರ ಹಾಗೂ 8,20,000 ಮೌಲ್ಯದ ಕಾರು ಮತ್ತು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೀನಾಕ್ಷಿ ಅಕ್ಟೋಬರ್ 3 ರಂದು ಕುಂದಾಪುರದ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬೈಕಿನಲ್ಲಿ ಬಂದು ಇಬ್ಬರು ವ್ಯಕ್ತಿಗಳು ಕುತ್ತಿಗೆಯಲ್ಲಿರುವ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿಯಾದ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರಾದ ಜಯರಾಮ್ ಡಿ ಗೌಡ ಸೂಕ್ತ ಮಾಹಿತಿಗಳನ್ನು ಕಲೆಹಾಕಿ ಸಂಜಯ್ ನನ್ನು ಶಿವಮೊಗ್ಗದ ಮುಡಬಾ ಕ್ರಾಸ್ ಬಳಿ ಹಾಗೂ ವಸಂತ್ ಕುಮಾರ್ ನನ್ನು ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಬಳಿ ಬಂಧಿಸಿ ವಶಕ್ಕೆ ಪಡೆದಿದ್ದಾರೆ.


