ಕೋಲ್ಕತ್ತಾ: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಆವರಣದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು 2024ರಲ್ಲಿ ನಡೆದ, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮತ್ತೊಮ್ಮೆ ನೆನಪಿಸಿದೆ.
ಆರ್.ಜಿ.ಕರ್ ಘಟನೆಯ ಬೆನ್ನಲ್ಲೇ ಈಗ ಕೋಲ್ಕತ್ತಾದಿಂದ 170 ಕಿ.ಮೀ ದೂರದಲ್ಲಿರುವ ಪಶ್ಚಿಮ ಬಂಗಾಳದ ಪ್ರಮುಖ ಕೈಗಾರಿಕಾ ಕೇಂದ್ರವಾದ ದುರ್ಗಾಪುರದ ಶೋಭಾಪುರ ಸಮೀಪದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದೆ. ಸಂತ್ರಸ್ತೆಯು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಮೂಲತಃ ಒಡಿಶಾದ ಜಲೇಶ್ವರದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಸಂತ್ರಸ್ತೆಯು ತನ್ನ ಸ್ನೇಹಿತನೊಂದಿಗೆ ಕ್ಯಾಂಪಸ್‌ನಿಂದ ಹೊರಗೆ ಹೋಗಿದ್ದರು. ಅವರು ವಾಪಸ್ ಬರುವಾಗ, ವ್ಯಕ್ತಿಯೊಬ್ಬ ಆಕೆಯನ್ನು ಆಸ್ಪತ್ರೆಯ ಹಿಂದಿನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದು ವರದಿ ಪ್ರಕಾರ, ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಊಟಕ್ಕಾಗಿ ಕ್ಯಾಂಪಸ್‌ನಿಂದ ಹೊರಗೆ ಹೋದಾಗ, ಕೆಲವರು ಅವರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಆಕೆಯ ಸ್ನೇಹಿತ ಅಲ್ಲಿಂದ ಓಡಿಹೋಗಿದ್ದು, ದುಷ್ಕರ್ಮಿಗಳು ಆಕೆಯನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಸನ್ಸೋಲ್-ದುರ್ಗಾಪುರ ನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



















