ರಾಮನಗರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ದುರಂತ ಸಂಭವಿಸಿ, ಮೂವರು ಸಾವನಪ್ಪಿದ್ದು, 4 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಡದಿಯ ಭೀಮನಹಳ್ಳಿ ಗ್ರಾಮದ ಶೆಡ್‌ವೊಂದರಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮನುರುಲ್ ಶೇಖ್, ಜಾವಿದ್ ಅಲಿ ಹಾಗೂ ತಜ್‌ಬುಲ್ ಮೃತಪಟ್ಟ ದುರ್ದೈವಿಗಳು.
ಪಶ್ಚಿಮ ಬಂಗಾಳದಿಂದ 7 ಮಂದಿ ಕೂಲಿ ಕೆಲಸಕ್ಕೆಂದು ಬಿಡದಿಗೆ ಬಂದಿದ್ದರು. ಬಿಮೇನಹಳ್ಳಿ ಬಳಿ ಕಟ್ಟಡದ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಟ್ಟಡ ಕೆಲಸದ ಪಕ್ಕದಲ್ಲೇ ಕಬ್ಬಿಣದ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು. ಎಂದಿನಂತೆ ಕೆಲಸ ಮುಗಿಸಿಕೊಂಡು ಶೆಡ್ ಬಳಿ ಬಂದು ರಾತ್ರಿ ಅಡುಗೆ ಮಾಡಿ ಊಟ ಮಾಡಿ ಮಲಗಿದ್ದರು. ಚಿಕ್ಕ ಶೆಡ್ನಲ್ಲೇ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದರು. ರಾತ್ರಿ ವೇಳೆ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿತ್ತು. ಇದನ್ನು ಗಮನಿಸದ ಓರ್ವ ಬೆಳಗ್ಗೆ ಎದ್ದು, ಬೀಡಿ ಹೊತ್ತಿಸಲು ಬೆಂಕಿ ಗೀರಿದ್ದಾನೆ. ಬೆಂಕಿ ಗೀರುತ್ತಿದಂತೆ ಕ್ಷಣಾರ್ಧದಲ್ಲೇ ಶೆಡ್ ತುಂಬ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.
7 ಮಂದಿ ಕಾರ್ಮಿಕರಲ್ಲಿ ಮೂವರು ಚಿಕಿತ್ಸೆ ಫಲಾಕಾರಿಯಾಗದೆ ಸಾವನಪ್ಪಿದ್ದು, ಇನ್ನೂ ನಾಲ್ವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.