ಮುಂಬೈ : 2026ರ ಐಪಿಎಲ್ಗೆ ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಂದ ತಯಾರಿ ಶುರುವಾಗಿದೆ. ಮುಂದಿನ ಡಿಸೆಂಬರ್ 13ರಿಂದ 15ರ ಅವಧಿಯಲ್ಲಿ ಐಪಿಎಲ್ ಸೀಸನ್ 19ರ ಟೂರ್ನಿಗೆ ಮಿನಿ ಹರಾಜು ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳಿಗೆ ರಿಟೇನ್ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್ ಫಿಕ್ಸ್ ಮಾಡಲಾಗಿದೆ. ಮುಂದಿನ ನವೆಂಬರ್ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಐಪಿಎಲ್ ಮಂಡಳಿ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ಭಾರತದಲ್ಲೇ ಹರಾಜು ಸಾಧ್ಯತೆ : 2023ರ ಐಪಿಎಲ್ ಹರಾಜು ದುಬೈನಲ್ಲಿ ನಡೆದರೆ, 2024ರ ಐಪಿಎಲ್ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿತ್ತು. ಇದೀಗ ಬಿಸಿಸಿಐ ಭಾರತದಲ್ಲಿ ಮಿನಿ ಹರಾಜು ನಡೆಸಲು ನಿರ್ಧರಿಸಿದರೆ ಆಶ್ಚರ್ಯವೇನಿಲ್ಲ ಎಂದು ಫ್ರಾಂಚೈಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ.
ಪರ್ಸ್ ಮೊತ್ತ ಇನ್ನಷ್ಟು ಹೆಚ್ಚಳ : ಈ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್ ಫ್ರಾಂಚೈಸಿಗಳ ಪರ್ಸ್ 2023-24ರ ಐಪಿಎಲ್ ಟೂರ್ನಿಯಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮೂರು ವರ್ಷಗಳ ಅವಧಿಗೆ ವೇತನ ಸೇರಿ ಪರ್ಸ್ ಮೊತ್ತವನ್ನ 157 ಕೋಟಿ ರೂ.ಗಳ ವರೆಗೆ ಹೆಚ್ಚಿಸಿದೆ. ಅದರಂತೆ 2025ರ ಐಪಿಎಲ್ ಟೂರ್ನಿಯಲ್ಲಿ ಫ್ರಾಂಚೈಸಿಗಳು ಸಂಬಳ ಮಿತಿ ಸೇರಿ ತಲಾ 146 ಕೋಟಿ ರೂ. ಬಳಕೆ ಮಾಡಿದ್ದವು. 2026ರ ಟೂರ್ನಿಗೆ 151 ಕೋಟಿ ರೂ. ಬಳಕೆ ಮಾಡಲಿದ್ದು, 2027ರ ಟೂರ್ನಿಗೆ 157 ಕೋಟಿ ರೂ.ಗಳನ್ನು ಫ್ರಾಂಚೈಸಿಗಳು ಬಳಸಲಿವೆ.