ಮುಂಬೈ : ವಿಶ್ವದ ಮೊದಲ ಸಸ್ಯಾಹಾರಿ ಬಾಡಿಬಿಲ್ಡರ್ ಎಂದೇ ಖ್ಯಾತರಾಗಿದ್ದ ನಟ ಮತ್ತು ದೇಹದಾಢ್ಯ ಪಟು ವರೀಂದರ್ ಸಿಂಗ್ ಘುಮಾನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಅಮೃತಸರದ ಫೋರ್ಟಿಸ್ ಆಸ್ಪತ್ರೆಯಲ್ಲಿ ತೋಳಿನ ಸ್ನಾಯು ಗಾಯದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಚಿಕಿತ್ಸೆ ಬಳಿಕ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ.
ದೇಹದಾಢ್ಯ ಮತ್ತು ಮನರಂಜನಾ ಜಗತ್ತಿನಲ್ಲಿ ಚಿರಪರಿಚಿತರಾಗಿದ್ದ ವರೀಂದರ್, ‘ಕಬಡ್ಡಿ ಒನ್ಸ್ ಅಗೇನ್’ ಎಂಬ ಪಂಜಾಬಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.

ಬಾಡಿಬಿಲ್ಡಿಂಗ್ ಕ್ಷೇತ್ರದ ಸಾಧನೆ : ವರೀಂದರ್ ಸಿಂಗ್ ಘುಮಾನ್ ಅವರು ವೃತ್ತಿಪರ ದೇಹದಾಢ್ಯದಲ್ಲಿ ತೊಡಗಿಸಿಕೊಂಡ ವಿಶ್ವದ ಮೊದಲ ಸಸ್ಯಾಹಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಈ ವಿಶಿಷ್ಟತೆಯೇ ಅವರನ್ನು ಇತರರಿಂದ ಭಿನ್ನವಾಗಿಸಿತ್ತು. ಅವರು 2009ರಲ್ಲಿ ‘ಮಿಸ್ಟರ್ ಇಂಡಿಯಾ’ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. ‘ಮಿಸ್ಟರ್ ಏಷ್ಯಾ’ ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮುವ ಮೂಲಕ ಭಾರತೀಯ ದೇಹದಾಢ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಹಾಲಿವುಡ್ ನಟ ಮತ್ತು ವಿಶ್ವವಿಖ್ಯಾತ ಬಾಡಿಬಿಲ್ಡರ್ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ಏಷ್ಯಾದಲ್ಲಿ ತಮ್ಮ ಉತ್ಪನ್ನಗಳ ರಾಯಭಾರಿಯಾಗಿ ವರೀಂದರ್ ಅವರನ್ನು ಆಯ್ಕೆ ಮಾಡಿದ್ದರು. ಸ್ಪೇನ್‌ನಲ್ಲಿ ನಡೆದ ‘ಅರ್ನಾಲ್ಡ್ ಕ್ಲಾಸಿಕ್ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್’ ಸ್ಪರ್ಧೆಯಲ್ಲಿ ವರೀಂದರ್ ಅವರ ದೇಹದಾಢ್ಯವನ್ನು ನೋಡಿ ಅರ್ನಾಲ್ಡ್, “ಅದ್ಭುತ ಪ್ರತಿಭೆ” ಎಂದು ಬಣ್ಣಿಸಿದ್ದರು.
ವರೀಂದರ್ ಸಿನಿಪಯಣ : ದೇಹದಾಢ್ಯದ ಜೊತೆಗೆ, ವರೀಂದರ್ ಅವರು ಚಿತ್ರರಂಗದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 2012ರಲ್ಲಿ ‘ಕಬಡ್ಡಿ ಒನ್ಸ್ ಅಗೇನ್’ ಎಂಬ ಪಂಜಾಬಿ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು. ನಂತರ, 2014ರಲ್ಲಿ ‘ರೋರ್: ಟೈಗರ್ಸ್ ಆಫ್ ದಿ ಸುಂದರ್‌ಬನ್ಸ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟರು. 2019ರಲ್ಲಿ ‘ಮರ್ಜಾವಾಂ’ ಚಿತ್ರದಲ್ಲಿಯೂ ಅವರು ನಟಿಸಿದ್ದರು. ಇತ್ತೀಚೆಗೆ, ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಚಿತ್ರದಲ್ಲಿ ಪಾಕಿಸ್ತಾನಿ ಜೈಲು ಗಾರ್ಡ್ ಶಕೀಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.