ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರು ಕೊನೆಗೂ ಒಂದು ವಾರದ ಭಾರತ ಪ್ರವಾಸ ಆರಂಭಿಸಿದ್ದು, ಇದು ನವದೆಹಲಿಗೆ ಒಂದು ವಿಶಿಷ್ಟವಾದ ರಾಜತಾಂತ್ರಿಕ ಸಂದಿಗ್ಧತೆಯನ್ನು ತಂದೊಡ್ಡಿದೆ. ಭಾರತವು ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಗುರುತಿಸದ ಕಾರಣ, ದ್ವಿಪಕ್ಷೀಯ ಮಾತುಕತೆಗಳ ಸಮಯದಲ್ಲಿ ತಾಲಿಬಾನ್ ಧ್ವಜವನ್ನು ಬಳಸುವ ಕುರಿತು ಗೊಂದಲ ಉಂಟಾಗಿದೆ.
2021ರಲ್ಲಿ ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ನಂತರ ತಾಲಿಬಾನ್ ಅಧಿಕಾರಕ್ಕೆ ಮರಳಿತ್ತು. ಬಳಿಕ, ಆಡಳಿತದ ಉನ್ನತ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಯಾಣಕ್ಕೆ ವಿನಾಯಿತಿ ನೀಡಿದ ನಂತರ ಮುತ್ತಖಿ ಅವರ ಈ ಪ್ರವಾಸ ಸಾಧ್ಯವಾಗಿದೆ. ತಮ್ಮ ಭೇಟಿಯ ಸಮಯದಲ್ಲಿ, ಮುತ್ತಖಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಈ ಭೇಟಿಯು ಪ್ರಾದೇಶಿಕ ರಾಜತಾಂತ್ರಿಕತೆಗೆ ನಿರ್ಣಾಯಕವಾಗಿದ್ದು, ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಲು ಭಾರತ ಮುಂದಾಗಿರುವ ಹಿನ್ನೆಲೆಯಲ್ಲಿ, ನೆರೆಯ ಪಾಕಿಸ್ತಾನವೂ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
“ಧ್ವಜದ ಸಂದಿಗ್ಧತೆ”
ದ್ವಿಪಕ್ಷೀಯ ಮಾತುಕತೆಗಳ ವೇಳೆ, ರಾಜತಾಂತ್ರಿಕ ಶಿಷ್ಟಾಚಾರದ ಪ್ರಕಾರ, ಭೇಟಿ ನೀಡುವ ನಾಯಕರ ದೇಶದ ಧ್ವಜವನ್ನು ಭಾರತದ ಧ್ವಜದ ಜೊತೆಗೆ ಇರಿಸಲಾಗುತ್ತದೆ. ಆದರೆ, ಭಾರತವು ತಾಲಿಬಾನ್ ಆಡಳಿತವನ್ನು ಗುರುತಿಸದ ಕಾರಣ, ಅವರ ಧ್ವಜಕ್ಕೆ (ಇಸ್ಲಾಮಿಕ್ ಘೋಷಣೆಯಾದ ಶಹಾದಾವನ್ನು ಕಪ್ಪು ಅಕ್ಷರಗಳಲ್ಲಿ ಹೊಂದಿರುವ ಬಿಳಿ ಬಣ್ಣದ ಧ್ವಜ) ಅಧಿಕೃತ ಮಾನ್ಯತೆ ನೀಡಿಲ್ಲ. ದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯಲ್ಲಿ ಇನ್ನೂ ಹಿಂದಿನ ಅಶ್ರಫ್ ಘನಿ ಸರ್ಕಾರದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಧ್ವಜವನ್ನೇ ಹಾರಿಸಲಾಗುತ್ತಿದೆ. ಈ ಹಿಂದೆ ಭಾರತೀಯ ಅಧಿಕಾರಿಗಳು ಹಾಗೂ ಮುತ್ತಖಿ ನಡುವೆ ನಡೆದ ಸಭೆಗಳಲ್ಲಿ ಯಾವುದೇ ಧ್ವಜವನ್ನು ಹಿನ್ನೆಲೆಯಲ್ಲಿ ಇರಿಸದೆ ಮಾತುಕತೆ ನಡೆಸಲಾಗಿತ್ತು. ಆದರೆ, ಈ ಬಾರಿ ಸಭೆ ದೆಹಲಿಯಲ್ಲೇ ಸಭೆ ನಡೆಯುತ್ತಿರುವುದರಿಂದ, ಈ ವಿಷಯವು ಅಧಿಕಾರಿಗಳಿಗೆ ರಾಜತಾಂತ್ರಿಕ ಸವಾಲಾಗಿ ಪರಿಣಮಿಸಿದೆ.
“ಭಾರತ-ಅಫ್ಘಾನಿಸ್ತಾನ ಸಂಬಂಧ”
ಭಾರತವು ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಗುರುತಿಸದಿದ್ದರೂ, ಮಾನವೀಯ ನೆರವು, ವ್ಯಾಪಾರ ಮತ್ತು ವೈದ್ಯಕೀಯ ಬೆಂಬಲವನ್ನು ಸುಗಮಗೊಳಿಸಲು ಒಂದು ಸಣ್ಣ ಮಿಷನ್ ಅನ್ನು ಕಾಬೂಲ್‌ನಲ್ಲಿ ನಿರ್ವಹಿಸುತ್ತಿದೆ. ಯಾವುದೇ ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಆಫ್ಘನ್ ನೆಲವನ್ನು ಬಳಸಬಾರದು ಎಂದು ಭಾರತ ನಿರಂತರವಾಗಿ ಒತ್ತಾಯಿಸುತ್ತಿದೆ. ಇತ್ತೀಚೆಗೆ ರಷ್ಯಾ, ಚೀನಾ ಸೇರಿದಂತೆ ಏಳು ರಾಷ್ಟ್ರಗಳೊಂದಿಗೆ ಭಾರತವು ಅಫ್ಘಾನಿಸ್ತಾನದಲ್ಲಿ ವಿದೇಶಿ ಮಿಲಿಟರಿ ಮೂಲಸೌಕರ್ಯವನ್ನು ನಿಯೋಜಿಸುವ ಪ್ರಯತ್ನಗಳನ್ನು ವಿರೋಧಿಸಿತ್ತು. ಈ ಬೆಳವಣಿಗೆಗಳ ಮಧ್ಯೆ ಮುತ್ತಖಿ ಅವರ ಭೇಟಿಯು ಭಾರತ-ಅಫ್ಘಾನಿಸ್ತಾನ ಸಂಬಂಧದಲ್ಲಿ ಹೊಸ ಆಯಾಮವನ್ನು ನೀಡುವ ನಿರೀಕ್ಷೆಯಿದೆ