ನವದೆಹಲಿ: ದೆಹಲಿಯ ಮದನ್‌ಗೀರ್ ಪ್ರದೇಶದಲ್ಲಿ ಪತ್ನಿಯೊಬ್ಬಳು ತನ್ನ ಪತಿ ಮಲಗಿದ್ದಾಗ ಆತನ ಮೇಲೆ ಕುದಿಯುವ ಎಣ್ಣೆ ಸುರಿದು, ನಂತರ ಖಾರದ ಪುಡಿ ಎರಚಿದ ಆಘಾತಕಾರಿ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಪತಿ ದಿನೇಶ್, ಸದ್ಯ ಸಫ್ದರ್‌ಜಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ಅ.2 ರಂದು ಮುಂಜಾನೆ ಸುಮಾರು 3:15ಕ್ಕೆ ಈ ಘಟನೆ ನಡೆದಿದೆ. ದಿನೇಶ್ ಅವರು ತಮ್ಮ ಆರು ತಿಂಗಳ ಮಗಳೊಂದಿಗೆ ಮಲಗಿದ್ದಾಗ, ಪತ್ನಿ ಸಾಧನಾ ಈ ಕೃತ್ಯ ಎಸಗಿದ್ದಾರೆ. ಎಣ್ಣೆ ಸುರಿದಾಗ ಆದ ಸುಡುವ ಸಂವೇದನೆಯಿಂದ ಎಚ್ಚರಗೊಂಡ ದಿನೇಶ್, ಪತ್ನಿ ಖಾರದ ಪುಡಿಯೊಂದಿಗೆ ನಿಂತಿರುವುದನ್ನು ಕಂಡಿದ್ದಾರೆ. ತಾನು ಕಿರುಚಿದರೆ ಮತ್ತಷ್ಟು ಎಣ್ಣೆ ಸುರಿಯುವುದಾಗಿ ಪತ್ನಿ ಬೆದರಿಕೆ ಹಾಕಿದ್ದಾಗಿ ದಿನೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ದಿನೇಶ್ ಅವರ ಚೀರಾಟ ಕೇಳಿ ನೆರೆಹೊರೆಯವರು ಧಾವಿಸಿ ಬಂದಾಗ, ಸಾಧನಾ ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ನಂತರ, ಮನೆ ಮಾಲೀಕರು ದಿನೇಶ್ ಅವರ ಭಾವನಿಗೆ ಕರೆ ಮಾಡಿದ್ದಾರೆ. ಅವರು ಅಲ್ಲಿಗೆ ಧಾವಿಸಿದ ನಂತರವೇ ಗಾಯಾಳು ದಿನೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ಸುಮಾರು ಏಳು ತಿಂಗಳ ಹಿಂದೆ ಈ ಮನೆಗೆ ಬಾಡಿಗೆಗೆ ಬಂದಿದ್ದರು ಎಂದು ಮನೆ ಮಾಲೀಕರ ಮಗಳು ಅಂಜಲಿ ತಿಳಿಸಿದ್ದಾರೆ.
ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ದಿನೇಶ್ ಅವರು ಆಸ್ಪತ್ರೆಯಿಂದಲೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಂಪತಿಗೆ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಹಿಂದೆ ಕಾನೂನು ಕ್ರಮಗಳವರೆಗೆ ಹೋಗಿದ್ದರೂ, ನಂತರ ರಾಜಿ ಮಾಡಿಕೊಂಡು ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 1 ಮತ್ತು 2 ರ ಮಧ್ಯರಾತ್ರಿ ಕೂಡ ದಂಪತಿಯ ನಡುವೆ ದೊಡ್ಡ ಜಗಳ ನಡೆದಿತ್ತು. ಇದರ ಬೆನ್ನಲ್ಲೇ ಪತ್ನಿಯು ಪತಿಯ ಕೊಲೆಗೆ ಯತ್ನಿಸಿದ್ದಾರೆ. ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.