ಉತ್ತರ ಪ್ರದೇಶ: ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ದೇವರಿಯಾದ ಮಹರ್ಷಿ ದೇವರಹ ಬಾಬಾ ವೈದ್ಯಕೀಯ ಕಾಲೇಜಿನಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದ್ದು, ಕಾಲೇಜಿನ ಐದನೇ ಮಹಡಿಯಲ್ಲಿರುವ ಕುಡಿಯುವ ಟ್ಯಾಂಕ್‌ನಲ್ಲಿ ಶವವೊಂದು ಪತ್ತೆಯಾಗಿದೆ. ಇದೇ ಟ್ಯಾಂಕ್ ನ ನೀರನ್ನು ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಅಲ್ಲಿನ ಆಸ್ಪತ್ರೆಗೂ ಇದೇ ನೀರು ಸರಬರಾಜು ಮಾಡಲಾಗುತ್ತಿದ್ದು, ಆಸ್ಪತ್ರೆಗೆ ಬಂದಿದ್ದ ರೋಗಿಗಳ ಸಂಬಂಧಿಕರು ನೀರಿನಲ್ಲಿ ದುರ್ವಾಸನೆ ಬರುತ್ತಿದೆ ಎಂದು ಅಲ್ಲಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಇತ್ತ ದೂರು ಬಂದ ಕಾರಣಕ್ಕೆ ವಾಟರ್ ಟ್ಯಾಂಕ್ ಪರಿಶೀಲನೆ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ.
ಇದು ಕೊಲೆಯೋ ಅಥವಾ ಆತ್ಮಹತ್ಯೆಯೇ ಎಂಬುದು ತಿಳಿದು ಬಂದಿಲ್ಲ. ವಿದ್ಯಾರ್ಥಿಗಳು 10 ದಿನದಿಂದ ಶವ ಬಿದ್ದಿದ್ದ ಟ್ಯಾಂಕಿನ ನೀರನ್ನೇ ಕುಡಿದಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಅಲ್ಲಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಹೊರ ರೋಗಿ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ದೂರು ಬಂದ ಹಿನ್ನಲೆ ಸ್ವಚ್ಛಗೊಳಿಸುವ ಸಿಬ್ಬಂದಿ ನೀರಿನ ಟ್ಯಾಂಕ್‌ಗೆ ಹತ್ತಿ ಅದನ್ನು ಸ್ವಚ್ಛಗೊಳಿಸಿ ಸ್ಲ್ಯಾಬ್ ಅನ್ನು ತೆಗೆದಿದ್ದು, ಒಳಗೆ ಶವ ಇರುವುದನ್ನು ಕಂಡು ಆಘಾತಕ್ಕೊಳಗಿದ್ದಾರೆ.
ತಕ್ಷಣವೇ ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕೊತ್ವಾಲಿ ಠಾಣೆ ಪೊಲೀಸರು ಮತ್ತು ವಿಧಿವಿಜ್ಞಾನ (ಫೋರೆನ್ಸಿಕ್) ತಂಡ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಘಟನಾಸ್ಥಳಕ್ಕೆ ನಗರ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರೆಡ್ಡಿ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ. ಎಚ್.ಕೆ. ಮಿಶ್ರಾ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದು, ಪತ್ತೆಯಾದ ಶವವು ತುಂಬಾ ಊದಿಕೊಂಡಿದ್ದ ಕಾರಣ ಅದನ್ನು ಹೊರತೆಗೆಯಲು ಬಹಳ ಕಷ್ಟವಾಗಿದೆ. ಕೊನೆಗೆ, ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದ್ದು, ಶವದ ಗುರುತು ಇನ್ನೂ ಪತ್ತೆಯಾಗಿಲ್ಲ.
ಈ ಘಟನೆಯ ಬೆನ್ನಲ್ಲೇ, ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಬರನ್ವಾಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಘಟನೆಯು ಸ್ಥಳೀಯರಲ್ಲಿ ಭೀತಿಯನ್ನುಂಟು ಮಾಡಿದೆ. ಶವದ ಗುರುತು ಪತ್ತೆಗಾಗಿ ಹಾಗೂ ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ಮುಂದುವರೆದಿದ್ದು, ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಗಳಿದ್ದರು ಈ ಘಟನೆ ನಡೆದಿರುವುದು ಅಲ್ಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿ ಹಾಕಿವೆ.