ಬೆಂಗಳೂರು: “ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ಬಿಗ್ ಬಾಸ್ ಶೋಗೂ ಯಾವುದೇ ಸಂಬಂಧವಿಲ್ಲ. ನಾವು ನೋಟಸ್ ನೀಡಿರುವುದು ಜಾಲಿವುಡ್ ಸ್ಟುಡಿಯೋಸ್ ಗೆ ಮಾತ್ರ. ಹಾಗಾಗಿ, ನಮ್ಮ ಟಾರ್ಗೆಟ್ ಬಿಗ್ ಬಾಸ್ ಅಲ್ಲ. ಇದರಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ” ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನರೇಂದ್ರಸ್ವಾಮಿ, “ಜಾಲಿ ಸ್ಟುಡಿಯೋಸ್ ಕೆಲವು ನಿರ್ಮಾಣಗಳನ್ನು ನಕ್ಷೆಯ ಅನುಮತಿ ಇಲ್ಲದೆ ಕಟ್ಟಲಾಗಿದೆ. ಅಲ್ಲದೆ ಅಲ್ಲಿಂದ ಮಲಿನಯುಕ್ತ ನೀರಿನ ವಿಲೇವಾರಿ ಸರಿಯಾಗಿ ಮಾಡಿಲ್ಲ. ಇಂಥ ಕೆಲವು ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಲಿವುಡ್ ಸ್ಟುಡಿಯೋಸ್ ಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಅದ್ಯಾವುದಕ್ಕೂ ಉತ್ತರ ಕೊಡಲಿಲ್ಲ. ಹಾಗಾಗಿ, ನಾವು ಕ್ರಮ ಕೈಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮಾಲಿನ್ಯ ನಿಯಂತ್ರಣ ಮಂಡಳಿಗೂ ಬಿಗ್ ಬಾಸ್ ಶೋ ವನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪಗಳ ಬಗ್ಗೆ ಮಾತನಾಡಿ. “ನಮಗೂ ಬಿಗ್ ಬಾಸ್ ಗೂ ಸಂಬಂಧವಿಲ್ಲ. ನಾವು ಕ್ರಮ ಕೈಗೊಂಡಿರುವುದು ಜಾಲಿ ಸ್ಟುಡಿಯೋಸ್ ವಿರುದ್ಧ. ನಾವು ಈ ಹಿಂದೆ ಕೊಟ್ಟಿರುವ ನೋಟಿಸ್ ಗಳಿಗೆ ಜಾಲಿ ಸ್ಟುಡಿಯೋಸ್ ಉತ್ತರಿಸಿರಲಿಲ್ಲ. ಅದೇ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವುದೇ ಕ್ಷಣದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಆ ಸ್ಟುಡಿಯೋದ ಆಡಳಿತ ಮಂಡಳಿಗೂ ಗೊತ್ತಿತ್ತು. ಆ ವಿಚಾರವನ್ನು ಅವರು ಬಿಗ್ ಮ್ಯಾನೇಜ್ ಮೆಂಟ್ ಗೆ ಮೊದಲೇ ತಿಳಿಸಿರಬೇಕಿತ್ತು. ಅದನ್ನು ಗುಟ್ಟಾಗಿಟ್ಟಿದ್ದು ಅವರಿಬ್ಬರ ಆಂತರಿಕ ವಿಚಾರ. ಅದಕ್ಕೂ ನಮಗೂ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಜಾಲಿ ಸ್ಟುಡಿಯೋಸ್ ಅವರು ಮಾಲಿನ್ಯ ಮಂಡಳಿಯ ನಿಯಮಗಳನ್ನು ಪಾಲಿಸಲು ಮುಂದೆ ಬಂದಿದ್ದು, ಅದಕ್ಕಾಗಿ ಈಗ ಕೈಕೊಂಡಿರುವ ಕ್ರಮಗಳನ್ನು 10 ದಿನಗಳವರೆಗೆ ತಡೆಹಿಡಿಯಬೇಕು ಎಂದು ಜಾಲಿ ಸ್ಟುಡಿಯೋಸ್ ಮನವಿ ಮಾಡಿರುವ ಬಗ್ಗೆ ಹರಡಿರುವ ಸುದ್ದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಸ್ವಾಮಿ, ಆ ಬಗ್ಗೆ ಯಾರೂ ನಮಗೆ ಮನವಿ ಮಾಡಿಲ್ಲ ಹಾಗೂ ನಮ್ಮನ್ನು ಭೇಟಿ ಮಾಡಿ ಚರ್ಚಿಸಿಲ್ಲ ಎಂದು ತಿಳಿಸಿದ್ದಾರೆ.