ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 19,650 ಕೋಟಿ ರೂ. ವೆಚ್ಚದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ಇದು ಭಾರತದ ವಿಮಾನಯಾನ ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನ ನೀಡಲಿದೆ.
ನವಿ ಮುಂಬೈ ವಿಮಾನ ನಿಲ್ದಾಣವು ಒಟ್ಟು 1,160 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ಅದಾನಿ ಗ್ರೂಪ್‌ನ ಕಂಪನಿಯಾದ ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ. 74ರಷ್ಟು ಪಾಲನ್ನು ಹೊಂದಿದ್ದು, ಉಳಿದ ಶೇ. 26ರಷ್ಟು ಪಾಲನ್ನು ಸಿಡ್ಕೊ ಹೊಂದಿದೆ.
ಈ ವಿಮಾನ ನಿಲ್ದಾಣವು ನಾಲ್ಕು ಟರ್ಮಿನಲ್‌ಗಳು ಮತ್ತು ಎರಡು ಸಮಾನಾಂತರ ರನ್‌ವೇಗಳನ್ನು ಹೊಂದಿದೆ. ಅಲ್ಲದೆ, ಗಣ್ಯ ಪ್ರಯಾಣಿಕರಿಗಾಗಿ ಪ್ರತ್ಯೇಕ ವಿವಿಐಪಿ ಟರ್ಮಿನಲ್ ನಿರ್ಮಾಣವೂ ಯೋಜನೆಯಲ್ಲಿದೆ. ಇದರ ನಿರ್ಮಾಣ 2026 ರಲ್ಲಿ ಆರಂಭಗೊಂಡು 2030 ರಲ್ಲಿ ಪೂರ್ಣಗೊಳ್ಳುವ ಗುರಿ ಹೊಂದಿದೆ. ಲಂಡನ್ ಮೂಲದ ಝಹಾ ಹದೀದ್ ಆರ್ಕಿಟೆಕ್ಟ್ಸ್ ವಿನ್ಯಾಸಗೊಳಿಸಿದ ಈ ಟರ್ಮಿನಲ್, ಕಮಲದ ಹೂವಿನಿಂದ ಸ್ಫೂರ್ತಿ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳೂ ಇರಲಿವೆ.
ಈ ವಿಮಾನ ನಿಲ್ದಾಣದ ವಿಶೇಷತೆಗಳಲ್ಲಿ ಒಂದು ಆಟೋಮೇಟೆಡ್ ಪೀಪಲ್ ಮೂವರ್ ಆಗಿದೆ. ಇದು ನಾಲ್ಕೂ ಟರ್ಮಿನಲ್‌ಗಳನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರಯಾಣಿಕರ ಸುಲಭ ವರ್ಗಾವಣೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಸುಸ್ಥಿರ ವಿಮಾನಯಾನ ಇಂಧನ ಸಂಗ್ರಹಣೆ, ಸುಮಾರು 47 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಎಲೆಕ್ಟ್ರಿಕ್ ಬಸ್ ಸೇವೆಗಳೂ ಇಲ್ಲಿ ಲಭ್ಯವಿರಲಿವೆ. ಎನ್‌ಎಂಐಎ ಭಾರತದ ಮೊದಲ ವಾಟರ್ ಟ್ಯಾಕ್ಸಿ ಸೇವೆಯಿಂದ ಸಂಪರ್ಕಿಸಲ್ಪಟ್ಟ ವಿಮಾನ ನಿಲ್ದಾಣವಾಗಲಿದೆ.