ಚಂಡೀಗಢ: ಎರಡು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟ ಹರ್ಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಅವರ ಸಾವಿನ ತನಿಖೆ ತೀವ್ರಗೊಂಡಿದ್ದು, ಅವರು ಬರೆದಿದ್ದಾರೆ ಎನ್ನಲಾದ 9 ಪುಟಗಳ ಆತ್ಮಹತ್ಯೆ ಪತ್ರ ಹಾಗೂ ಲಂಚ ಪ್ರಕರಣದ ಸುತ್ತ ಅನುಮಾನಗಳು ದಟ್ಟವಾಗಿವೆ. ವೃತ್ತಿಪರ ಅವಮಾನ, ತನ್ನ ಮಾಜಿ ಸಹಾಯಕನ ಮೇಲಿನ ಲಂಚದ ಹಗರಣ ಮತ್ತು ಇಲಾಖೆಯಲ್ಲಿನ ತಾರತಮ್ಯದಿಂದ ತೀವ್ರ ಖಿನ್ನತೆಗೆ ಒಳಗಾಗಿ ಕುಮಾರ್ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹರ್ಯಾಣ ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ಟೋಬರ್ 7ರಂದು ಚಂಡೀಗಢದ ನಿವಾಸದಲ್ಲಿ 2001ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪೂರನ್ ಕುಮಾರ್ ಮೃತದೇಹ ಪತ್ತೆಯಾಗಿತ್ತು. ಘಟನಾ ಸ್ಥಳದಲ್ಲಿ ಒಂಬತ್ತು ಪುಟಗಳ ಡೆತ್ ನೋಟ್ ಮತ್ತು ವೈಯಕ್ತಿಕ ವಿಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
“ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ”
ಪೊಲೀಸರು ವಶಪಡಿಸಿಕೊಂಡಿರುವ ಡೆತ್ ನೋಟ್‌ನಲ್ಲಿ, ಕುಮಾರ್ ಅವರು ತಮಗೆ ಕಿರುಕುಳ, ಜಾತಿ ತಾರತಮ್ಯ ಮತ್ತು ನಿರಂತರ ಅವಮಾನ ಮಾಡಿದ ಓರ್ವ ಹಾಲಿ ಮತ್ತು ಇಬ್ಬರು ನಿವೃತ್ತ ಐಪಿಎಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ರದಲ್ಲಿ, ವರ್ಷಗಳಿಂದ ತಾನು ಅನುಭವಿಸಿದ “ಮಾನಸಿಕ ಕಿರುಕುಳ” ಮತ್ತು ಕೆಲಸದ ಸ್ಥಳದಲ್ಲಿನ ಒಂಟಿತನವನ್ನು ವಿವರಿಸಿದ್ದಾರೆ ಎನ್ನಲಾಗಿದೆ.
“ಲಂಚ ಪ್ರಕರಣದ ನಂಟು”
ಪೂರನ್ ಕುಮಾರ್ ಅವರ ಆತ್ಮಹತ್ಯೆಗೆ ಲಂಚ ಪ್ರಕರಣವೊಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಕ್ಟೋಬರ್ 6 ರಂದು, ಕುಮಾರ್ ಅವರ ಮಾಜಿ ಗನ್‌ಮ್ಯಾನ್ ಇಎಎಸ್‌ಐ ಸುಶೀಲ್ ಕುಮಾರ್‌ನನ್ನು 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಂಧಿಸಲಾಗಿತ್ತು. ವಿಚಾರಣೆ ವೇಳೆ, ತಾನು ಪೂರನ್ ಕುಮಾರ್ ಅವರ ಪರವಾಗಿ ಹಣ ಕೇಳಿದ್ದಾಗಿ ಸುಶೀಲ್ ಹೇಳಿಕೆ ನೀಡಿದ್ದನು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕುಮಾರ್ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ತನ್ನ ವರ್ಚಸ್ಸಿಗೆ ಧಕ್ಕೆ ತರಲು ಈ ಪ್ರಕರಣವನ್ನು ಸೃಷ್ಟಿಸಲಾಗಿದೆ ಎಂದು ಅವರು ಆತಂಕಗೊಂಡಿದ್ದರು.
“ವರ್ಗಾವಣೆ ಮತ್ತು ತಾರತಮ್ಯದ ಆರೋಪ”
ಇತ್ತೀಚೆಗೆ ಕುಮಾರ್ ಅವರನ್ನು ರೋಹ್ಟಕ್‌ನ ಐಜಿ ಹುದ್ದೆಯಿಂದ ಸುನಾರಿಯಾದ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಅವಮಾನಕರ ವರ್ಗಾವಣೆ ಎಂದು ಪರಿಗಣಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ, ಬಡ್ತಿ, ಪೋಸ್ಟಿಂಗ್ ಮತ್ತು ತಾರತಮ್ಯಕ್ಕೆ ಸಂಬಂಧಿಸಿದಂತೆ ಕುಮಾರ್ ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಲಾಖೆಯಲ್ಲಿ ಜಾತಿ ಮತ್ತು ಧಾರ್ಮಿಕ ಪೂರ್ವಗ್ರಹದ ಬಗ್ಗೆಯೂ ಅವರು ಆಗಾಗ್ಗೆ ಮಾತನಾಡುತ್ತಿದ್ದರು.
ಪ್ರಸ್ತುತ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ಚಂಡೀಗಢ ಪೊಲೀಸ್ ಮತ್ತು ಹರಿಯಾಣ ಡಿಜಿಪಿ ಕಚೇರಿ ಈ ಪ್ರಕರಣದ ಬಗ್ಗೆ ಪ್ರತ್ಯೇಕ ತನಿಖೆಗಳನ್ನು ಆರಂಭಿಸಿವೆ.