ಗುವಾಹಟಿ : ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಅವರ ಸಾವಿನ ಪ್ರಕರಣವು ದಿನೇ ದಿನೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಅವರ ಸಂಬಂಧಿ ಹಾಗೂ ಅಸ್ಸಾಂ ಪೊಲೀಸ್ ಅಧಿಕಾರಿಯಾಗಿರುವ ಸಂದೀಪನ್ ಗರ್ಗ್ ಅವರನ್ನು ಬಂಧಿಸಲಾಗಿದೆ. ಜುಬೀನ್ ಅವರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಸಂದೀಪನ್ ಅವರನ್ನು ಅಸ್ಸಾಂನ ಅಪರಾಧ ತನಿಖಾ ವಿಭಾಗದ (ಸಿಐಡಿ) ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ.
ಅಸ್ಸಾಂ ಪೊಲೀಸ್ ಸೇವೆಯಲ್ಲಿ (APS) ಪೊಲೀಸ್ ವರಿಷ್ಠಾಧಿಕಾರಿಯಾಗಿ (ಪ್ರಭಾರ) ಸೇವೆ ಸಲ್ಲಿಸುತ್ತಿರುವ ಸಂದೀಪನ್ ಗರ್ಗ್ ಅವರನ್ನು ಕಳೆದ ಕೆಲವು ದಿನಗಳಿಂದ ಹಲವು ಬಾರಿ ವಿಚಾರಣೆಗೆ ಒಳಪಡಿಸಲಾಗಿತ್ತು. ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ಜುಬೀನ್ ಗರ್ಗ್ ನಿಧನರಾದಾಗ ಸಂದೀಪನ್ ಕೂಡ ಅವರ ಜೊತೆಯಲ್ಲಿದ್ದರು. ಈ ಪ್ರಕರಣದಲ್ಲಿ ಇದು ಐದನೇ ಬಂಧನವಾಗಿದೆ. “ನಾವು ಸಂದೀಪನ್ ಗರ್ಗ್ ಅವರನ್ನು ಬಂಧಿಸಿದ್ದೇವೆ. ಈಗ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ” ಎಂದು ಸಿಐಡಿ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಜುಬೀನ್ ಅವರ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ, ಸಂಗೀತಗಾರ ಶೇಖರಜ್ಯೋತಿ ಗೋಸ್ವಾಮಿ, ಗಾಯಕಿ ಅಮೃತಪ್ರವಾ ಮಹಂತ ಮತ್ತು ಈಶಾನ್ಯ ಭಾರತ ಉತ್ಸವದ ಸಂಘಟಕ ಶ್ಯಾಮಕಾನು ಮಹಂತ ಅವರನ್ನು ಬಂಧಿಸಲಾಗಿದ್ದು, ಅವರೆಲ್ಲರೂ ಸದ್ಯ ಪೊಲೀಸ್ ವಶದಲ್ಲಿದ್ದಾರೆ. ಜುಬೀನ್ ಸಮುದ್ರದಲ್ಲಿ ಈಜುತ್ತಿರುವಾಗ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಅದೇ ಸಮಯದಲ್ಲಿ ಅವರು ಹೋಗಿದ್ದ ವಿಹಾರ ನೌಕೆಯಲ್ಲಿದ್ದ ಎಂಟು ಮಂದಿಗೆ ಸಿಐಡಿ ಸಮನ್ಸ್ ನೀಡಿತ್ತು, ಆದರೆ ಒಬ್ಬರನ್ನು ಹೊರತುಪಡಿಸಿ ಉಳಿದ ಏಳು ಮಂದಿ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ತಿಳಿಸಿದ್ದರು.
ಜುಬೀನ್ ಗರ್ಗ್ ಅವರ ಬ್ಯಾಂಡ್ ಸದಸ್ಯರಾದ ಶೇಖರ್ ಜ್ಯೋತಿ ಗೋಸ್ವಾಮಿ ಅವರು, ಮ್ಯಾನೇಜರ್ ಸಿದ್ಧಾರ್ಥ ಶರ್ಮಾ ಮತ್ತು ಶ್ಯಾಮಕಾನು ಮಹಂತ ಅವರು ಗಾಯಕನಿಗೆ ವಿಷ ಪ್ರಾಶನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿಂಗಾಪುರದ ಸಮುದ್ರದಲ್ಲಿ ಜುಬೀನ್ ಉಸಿರುಗಟ್ಟಿ ಮುಳುಗುತ್ತಿದ್ದಾಗ, ಶರ್ಮಾ ಅವರು “ಜಾಬೊ ದೇ, ಜಾಬೊ ದೇ” (ಹೋಗಲಿ ಬಿಡಿ, ಹೋಗಲಿ ಬಿಡಿ) ಎಂದು ಕೂಗುತ್ತಿದ್ದರು ಎಂದು ರಿಮಾಂಡ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಜುಬೀನ್ ಸಾವನ್ನು ಅಪಘಾತವೆಂದು ಬಿಂಬಿಸುವ “ಪಿತೂರಿ” ನಡೆದಿದೆ ಎಂದೂ ಗೋಸ್ವಾಮಿ ಆರೋಪಿಸಿದ್ದಾರೆ.