ಗಾಜಾ : ಕಳೆದ ಎರಡು ವರ್ಷಗಳಿಂದ ಯುದ್ಧದಿಂದ ತತ್ತರಿಸಿರುವ ಗಾಜಾ ಪಟ್ಟಿಯಲ್ಲಿ ಜನರು ಯುದ್ಧಕ್ಕಿಂತಲೂ ಆಹಾರ ಮತ್ತು ಕುಡಿಯುವ ನೀರಿಲ್ಲದೇ ಕೊನೆಯುಸಿರೆಳೆಯುತ್ತಿದ್ದಾರೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಇಲ್ಲಿನ ಶೇ. 96ರಷ್ಟು ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ಆದರೂ, ಇಲ್ಲಿನ ಜನರು ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್‌ನೆಟ್ ಮೂಲಕ ಇಸ್ರೇಲಿ ವೈಮಾನಿಕ ದಾಳಿಗಳು, ಸಾಮೂಹಿಕ ವಲಸೆ ಮತ್ತು ಸಾವಿನ ದೃಶ್ಯಗಳನ್ನು ದಾಖಲಿಸುತ್ತಲೇ ಇದ್ದಾರೆ. ಆಹಾರ ಮತ್ತು ನೀರಿಲ್ಲದಿದ್ದರೂ, ಗಾಜಾದ ಜನರಿಗೆ ಇಂಟರ್‌ನೆಟ್ ಮತ್ತು ಮೊಬೈಲ್ ಚಾರ್ಜ್ ಮಾಡಲು ಹೇಗೆ ಸಾಧ್ಯವಾಗುತ್ತಿದೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ನಂತರ, ಇಸ್ರೇಲಿ ರಕ್ಷಣಾ ಪಡೆಗಳು ಗಾಜಾದ ಶೇ. 90ರಷ್ಟು ಕಟ್ಟಡಗಳನ್ನು ನೆಲಸಮ ಮಾಡಿವೆ. ಆದರೂ, ಪತ್ರಕರ್ತರು ಮತ್ತು ಸಾಮಾನ್ಯ ನಾಗರಿಕರು ತಮ್ಮ ಮೇಲೆ ನಡೆಯುತ್ತಿರುವ ದಾಳಿಗಳನ್ನು, ಸಾವು-ನೋವುಗಳನ್ನು ಫಿಲ್ಟರ್ ಮಾಡದೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುತ್ತಿದ್ದಾರೆ.
ಇ-ಸಿಮ್‌ಗಳು – ಗಾಜಾದ ಡಿಜಿಟಲ್ ಜೀವನಾಡಿ : ಗಾಜಾದಲ್ಲಿ ನೆಟ್‌ವರ್ಕ್ ಸಂಪರ್ಕ ಕಡಿತಗೊಂಡಾಗ ಇ-ಸಿಮ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವು ಭೌತಿಕ ಸಿಮ್ ಕಾರ್ಡ್‌ಗಳಲ್ಲ, ಬದಲಾಗಿ ಕ್ಯೂಆರ್ ಕೋಡ್ ಮೂಲಕ ಸಕ್ರಿಯಗೊಳಿಸಬಹುದಾದ ಡಿಜಿಟಲ್ ಸಿಮ್‌ಗಳಾಗಿವೆ.
ವಿಶ್ವದಾದ್ಯಂತದ ಸ್ವಯಂಸೇವಕರು ‘ಗಾಜಾ ಆನ್‌ಲೈನ್’ ಮತ್ತು ‘ಕನೆಕ್ಟಿಂಗ್ ಹ್ಯುಮಾನಿಟಿ’ಯಂತಹ ಗುಂಪುಗಳ ಮೂಲಕ ದಾನ ಮಾಡಿದ ಇ-ಸಿಮ್‌ಗಳು 2023ರಿಂದ ಇಲ್ಲಿಯವರೆಗೆ 4,50,000 ಕ್ಕೂ ಹೆಚ್ಚು ಗಾಜಾದ ಜನರನ್ನು ಜಗತ್ತಿನೊಂದಿಗೆ ಸಂಪರ್ಕದಲ್ಲಿರಿಸಿವೆ. ಇವು ಸ್ಥಳೀಯ 2ಜಿ ನೆಟ್‌ವರ್ಕ್ ಸ್ಥಗಿತಗೊಂಡಾಗ, ಇಸ್ರೇಲಿ ಅಥವಾ ಈಜಿಪ್ಟಿನ ನೆಟ್‌ವರ್ಕ್‌ಗಳಲ್ಲಿ ರೋಮಿಂಗ್ ಮಾಡಲು ಅವಕಾಶ ನೀಡುತ್ತವೆ. ಈಜಿಪ್ಟ್ ಗಡಿ ಸಮೀಪದ ರಫಾದಲ್ಲಿ, ಈಜಿಪ್ಟ್‌ನ ವೊಡಾಫೋನ್‌ನಂತಹ ಸೇವಾ ಪೂರೈಕೆದಾರರ ಸಿಗ್ನಲ್‌ಗಳು ದುರ್ಬಲವಾಗಿ ಲಭ್ಯವಾಗುತ್ತವೆ. ಆದಾಗ್ಯೂ, ಇ-ಸಿಮ್‌ಗಳನ್ನು ಬಳಸುವುದರಿಂದ ಇಸ್ರೇಲಿ ಪಡೆಗಳಿಂದ ಟ್ರ್ಯಾಕ್ ಆಗುವ ಮತ್ತು ದಾಳಿಗೆ ಗುರಿಯಾಗುವ ಅಪಾಯವೂ ಇದೆ.
ಚಾರ್ಜಿಂಗ್ ಮತ್ತು ನೆಟ್‌ವರ್ಕ್‌ಗಾಗಿ ಸರ್ಕಸ್ : ಗಾಜಾದ ವಿದ್ಯುತ್ ಗ್ರಿಡ್ ಸಂಪೂರ್ಣವಾಗಿ ನಾಶವಾಗಿರುವುದರಿಂದ, ದಿನಕ್ಕೆ ಕೇವಲ ಎರಡರಿಂದ ನಾಲ್ಕು ಗಂಟೆಗಳ ಕಾಲ ಮಾತ್ರ ವಿದ್ಯುತ್ ಲಭ್ಯವಿದೆ. ಜನರು ತಮ್ಮ ಮೊಬೈಲ್‌ಗಳನ್ನು ಚಾರ್ಜ್ ಮಾಡಲು ಆಸ್ಪತ್ರೆಗಳಲ್ಲಿ, ಸೌರ ಫಲಕಗಳು ಅಥವಾ ಜನರೇಟರ್‌ಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇಲ್ಲಿ ಸಿಗುವ ಚಾರ್ಜ್ ಒಂದು ದಿನಕ್ಕಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ವೆಸ್ಟ್ ಬ್ಯಾಂಕ್‌ನಲ್ಲಿರುವ ಸಂಬಂಧಿಕರು ಎಸ್‌ಎಂಎಸ್ ಮೂಲಕ ಕ್ರೆಡಿಟ್ ಟ್ರಾನ್ಸ್‌ಫರ್ ಮಾಡಿ ಸಹಾಯ ಮಾಡುತ್ತಾರೆ.
ಹಳತಾದ ತಂತ್ರಜ್ಞಾನ, ನಾಶವಾದ ಮೂಲಸೌಕರ್ಯ : ಗಾಜಾ ಇನ್ನೂ ಹಳತಾದ 2ಜಿ ಮೊಬೈಲ್ ನೆಟ್‌ವರ್ಕ್‌ಗಳಲ್ಲೇ ಸಿಲುಕಿದೆ. ಇಲ್ಲಿನ ಎಲ್ಲಾ ಅಂತಾರಾಷ್ಟ್ರೀಯ ಕರೆಗಳು ಇಸ್ರೇಲ್ ನಿಯಂತ್ರಿತ ಫೈಬರ್ ಆಪ್ಟಿಕ್ ಕೇಬಲ್‌ಗಳ ಮೂಲಕವೇ ಸಾಗುವುದರಿಂದ, ಇಸ್ರೇಲ್ ಯಾವಾಗ ಬೇಕಾದರೂ ಸಂಪರ್ಕವನ್ನು ಕಡಿತಗೊಳಿಸಬಹುದು. 2023ರಿಂದೀಚೆಗೆ, ಶೇ.70ಕ್ಕಿಂತ ಹೆಚ್ಚು ಟೆಲಿಕಾಂ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಇಂಟರ್‌ನೆಟ್ ಅನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆ ‘ನೆಟ್‌ಬ್ಲಾಕ್ಸ್’ ಪ್ರಕಾರ, 2023ರಿಂದ 10ಕ್ಕೂ ಹೆಚ್ಚು ಬಾರಿ ಇಸ್ರೇಲ್ ಉದ್ದೇಶಪೂರ್ವಕವಾಗಿ ಸಂಪರ್ಕವನ್ನು ಕಡಿತಗೊಳಿಸಿದೆ.
ಈ ಎಲ್ಲಾ ಸವಾಲುಗಳ ನಡುವೆಯೂ, ಪ್ಲೆಸ್ಟಿಯಾ ಅಲಾಖಾದ್, ಬಿಸಾನ್ ಓವ್ಡಾ ಮತ್ತು ಅಯ್ಮಾನ್ ಅಲ್ ಹೆಸಿ ಅವರಂತಹ ಪತ್ರಕರ್ತರು ಮತ್ತು ಪ್ರಭಾವಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಕ್ಷೀಣಿಸುತ್ತಿರುವ ಬ್ಯಾಟರಿ ಮತ್ತು ಅಸ್ಥಿರ ಇಂಟರ್‌ನೆಟ್ ಸಂಪರ್ಕದೊಂದಿಗೆ ಗಾಜಾದಲ್ಲಿನ ಭೀಕರತೆಯನ್ನು ಜಗತ್ತಿಗೆ ತೋರಿಸುತ್ತಿದ್ದಾರೆ.