ಬೆಂಗಳೂರು: ಕರ್ನಾಟಕ ಸೇರಿ ದೇಶಾದ್ಯಂತ ಕೋಟ್ಯಂತರ ಜನ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಬಡತನ ರೇಖೆಗಿಂತ ಕೆಳಗಿನವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಇವರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಪ್ರಮುಖವಾಗಿದೆ. ಉಚಿತವಾಗಿ ಅಕ್ಕಿ, ಗೋಧಿ ಸೇರಿ ವಿವಿಧ ಪಡಿತರ ಪಡೆಯಲು ಇದು ನೆರವಾಗಲಿದೆ. ಹಾಗೆಯೇ, ಸರ್ಕಾರದ ಯೋಜನೆಗಳನ್ನು ಪಡೆಯಲು ಕೂಡ ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಆದರೆ, ಜನ ಮಾಡುವ ಕೆಲ ತಪ್ಪುಗಳಿಂದ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇರುತ್ತದೆ.
ಪಡಿತರ ಚೀಟಿಗಳು ರದ್ದಾದರೆ, ಪ್ರಮುಖ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುವುದಿಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ), ಆಯುಷ್ಮಾನ್ ಭಾರತ್, ವಸತಿ ಯೋಜನೆಯಂತಹ ಸೌಲಭ್ಯಗಳಿಂದ ಜನ ವಂಚಿತರಾಗಬೇಕಾಗುತ್ತದೆ. ಹಾಗಾಗಿ, ರೇಷನ್ ಕಾರ್ಡ್ ಹೊಂದಿದವರು ಮಾಡಬಾರದಾದ ತಪ್ಪುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
• ಪಡಿತರ ಚೀಟಿ ಹೊಂದಿದವರು ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಇ-ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಎಂಬ ಡಿಜಿಟಲ್ ಪ್ರಕ್ರಿಯೆಯು ಈಗ ಕಡ್ಡಾಯವಾಗಿದೆ. ಈ ಪ್ರಕ್ರಿಯೆಯು ಫಲಾನುಭವಿಗಳ ಗುರುತನ್ನು ಆಧಾರ್ ಕಾರ್ಡ್ ಮೂಲಕ ದೃಢೀಕರಿಸುತ್ತದೆ. ಇ-ಕೆವೈಸಿ ಮಾಡಿಸದಿದ್ದರೆ ತಾತ್ಕಾಲಿಕ ಅಥವಾ ಶಾಶ್ವತವಾಗ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ.
• ರೇಷನ್ ಕಾರ್ಡನ್ನು ಆಧಾರ್ ಕಾರ್ಡ್ ಜತೆ ಲಿಂಕ್ ಮಾಡಿಸುವುದು ಕೂಡ ಪ್ರಮುಖವಾಗಿದೆ. ಲಿಂಕ್ ಮಾಡಿಸದಿದ್ದರೆ ಕಾರ್ಡ್ ರದ್ದಾಗುತ್ತದೆ. ಹಾಗಾಗಿ, ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿದವರ ಆಧಾರ್ ಕಾರ್ಡ್ ಗಳನ್ನು ರೇಷನ್ ಕಾರ್ಡ್ ಜತೆ ಲಿಂಕ್ ಮಾಡಿಸುವುದು ಕಡ್ಡಾಯ.
• ರೇಷನ್ ಕಾರ್ಡ್ ಹೊಂದಿದವರು ನಿಯಮಿತವಾಗಿ ಪಡಿತರ ಪಡೆದುಕೊಳ್ಳಬೇಕು. ಪದೇಪದೆ ರೇಷನ್ ಪಡೆಯದಿದ್ದರೂ ಕಾರ್ಡ್ ನಿಷ್ಕ್ರಿಯವಾಗುತ್ತದೆ.
• ಮಿತಿಗಿಂತ ಹೆಚ್ಚಿನ ಆದಾಯ ಪಡೆಯುವವರು, ಇನ್ಕಮ್ ಟ್ಯಾಕ್ಸ್ ಪಾವತಿಸುವವರು, ಸರ್ಕಾರದ ಉದ್ಯೋಗದಲ್ಲಿರುವವರ ಕಾರ್ಡ್ ಗಳನ್ನೂ ರದ್ದುಗೊಳಿಸಲಾಗುತ್ತದೆ.