ಬೆಂಗಳೂರು: 2025ರ ಐಪಿಎಲ್ ಋತುವಿನಲ್ಲಿ ತಮ್ಮ ಚೊಚ್ಚಲ ಕಿರೀಟವನ್ನು ಮುಡಿಗೇರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇತಿಹಾಸ ನಿರ್ಮಿಸಿದೆ. ಆದರೆ, ತಂಡದ ತೆರೆಮರೆಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ದುರದೃಷ್ಟಕರ ಕಾಲ್ತುಳಿತದ ನಂತರ, ತಂಡದ ಬಗ್ಗೆ ನಾನಾ ರೀತಿಯ ವದಂತಿಗಳು ಹರಿದಾಡುತ್ತಿದ್ದು, ಇದು ಆಟಗಾರರ ಮೇಲೂ ಪರಿಣಾಮ ಬೀರಿದೆ. ಹೊಸ ಋತುಮಾನಕ್ಕೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ತಂಡವು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಐಪಿಎಲ್ 2026ರ ಋತುವಿಗೂ ಮುನ್ನ ಆರ್‌ಸಿಬಿ ತಂಡದಿಂದ ಹೊರಹೋಗಬಹುದಾದ ಮೂವರು ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ:
- ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಗೇಟ್ ಪಾಸ್?
ತಂಡಕ್ಕೆ ಆಸ್ತಿಯಾಗಬಲ್ಲ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್, ಆದರೆ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಮಿಂಚಲು ವಿಫಲರಾಗಿದ್ದಾರೆ. 2025ರ ಐಪಿಎಲ್‌ನಲ್ಲಿ ಆಡಿದ 10 ಪಂದ್ಯಗಳಿಂದ ಕೇವಲ ಒಂದು ಅರ್ಧಶತಕದೊಂದಿಗೆ 112 ರನ್ ಗಳಿಸಿದ್ದಾರೆ. ಅವರ 10.75 ಕೋಟಿ ರೂ.ಗಳ ದುಬಾರಿ ಮೊತ್ತಕ್ಕೆ ಈ ಪ್ರದರ್ಶನ ನ್ಯಾಯ ಒದಗಿಸುವುದಿಲ್ಲ. ಬೌಲಿಂಗ್‌ನಲ್ಲಿ ಕೇವಲ ಎರಡು ವಿಕೆಟ್ ಪಡೆದಿದ್ದಾರೆ. ಅವರ ಬದಲಿಗೆ, ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಆಡಬಲ್ಲ ಟಿಮ್ ಡೇವಿಡ್ ರೂಪದಲ್ಲಿ ಆರ್‌ಸಿಬಿಗೆ ಹೊಸ ಆಶಾಕಿರಣ ಸಿಕ್ಕಿದೆ. - ಯಶ್ ದಯಾಳ್ ಅಚ್ಚರಿಯ ನಿರ್ಗಮನ?
15 ಪಂದ್ಯಗಳಿಂದ 13 ವಿಕೆಟ್ ಪಡೆದರೂ, ಯಶ್ ದಯಾಳ್ ಅವರ 9.59ರ ದುಬಾರಿ ಎಕಾನಮಿ ರೇಟ್ ತಂಡಕ್ಕೆ ಹೊರೆಯಾಗಿದೆ. ಭುವನೇಶ್ವರ್ ಕುಮಾರ್, ಜೋಶ್ ಹೇಝಲ್‌ವುಡ್ ಅವರಂತಹ ಅನುಭವಿ ವೇಗದ ಬೌಲರ್‌ಗಳು ತಂಡದಲ್ಲಿದ್ದಾರೆ. ಜೊತೆಗೆ ರೊಮಾರಿಯೋ ಶೆಫರ್ಡ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಲುಂಗಿ ಎನ್‌ಗಿಡಿಗೆ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಅವಕಾಶ ಸಿಕ್ಕಿತ್ತು. ಹೀಗಾಗಿ, ವೇಗದ ಬೌಲಿಂಗ್ ವಿಭಾಗದಲ್ಲಿ ಸಮತೋಲನ ಇರುವುದರಿಂದ ದಯಾಳ್ ಅವರನ್ನು ಕೈಬಿಡುವ ಸಾಧ್ಯತೆ ಇದೆ. - ಸುಯಶ್ ಶರ್ಮಾಗೂ ಸ್ಥಾನವಿಲ್ಲ?
ಮಿಸ್ಟರಿ ಸ್ಪಿನ್ನರ್ ಸುಯಶ್ ಶರ್ಮಾ 14 ಪಂದ್ಯಗಳನ್ನು ಆಡಿದರೂ, ನಿರೀಕ್ಷಿತ ಪರಿಣಾಮ ಬೀರಲು ವಿಫಲರಾಗಿದ್ದಾರೆ. ಅವರು 9ರ ಸಮೀಪದ ಎಕಾನಮಿಯಲ್ಲಿ ಕೇವಲ 8 ವಿಕೆಟ್‌ಗಳನ್ನು ಪಡೆದಿದ್ದು, ಅವರ ಸರಾಸರಿ 55 ಆಗಿದೆ. ಹೆಚ್ಚು ರನ್ ನೀಡಿ, ವಿಕೆಟ್ ಪಡೆಯಲು ವಿಫಲರಾಗುತ್ತಿರುವುದು, ಐಪಿಎಲ್ 2026ರ ಆರ್‌ಸಿಬಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಕಾಗುವುದಿಲ್ಲ.
ಆರ್‌ಸಿಬಿ ಐಪಿಎಲ್ 2025ರ ತಂಡ: ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹೇಝಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಾಸಿಖ್ ದಾರ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕ್ಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠೀ.