ಬೆಂಗಳೂರು: ಸಿಎಂ ಬದಲಾವಣೆ ಕುರಿತ ಹೇಳಿಕೆಗಳಿಂದ ಗೊಂದಲ ಆಗುತ್ತಿದೆ, ಇದಕ್ಕೆ ಹೈಕಮಾಂಡ್ ತಡೆ ನೀಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪರಮೇಶ್ವರ್, ಸಿಎಂ ಬದಲಾವಣೆ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಬೇಕೆಂಬ ಸತೀಶ್ ಜಾರಕಿಹೊಳಿ ಅವರು ಹೇಳಿರುವುದು ಸರಿ ಇದೆ. ನಿತ್ಯ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಇದನ್ನು ಬಗೆಹರಿಸುವ ಕೆಲಸ ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಔಷಧ ಕೊಡಬೇಕು ಎಂದು ಹೈಕಮಾಂಡ್‌ಗೆ ಗೊತ್ತಿದೆ. ಆ ಔಷಧ ಹೈಕಮಾಂಡ್ ಕೊಡುತ್ತದೆ. ಈ ಗೊಂದಲಗಳನ್ನು ಬಗೆಹರಿಸಬೇಕು ಎಂದು ನಾನೂ ಹೈಕಮಾಂಡ್‌ಗೆ ಒತ್ತಾಯಿಸ್ತೇನೆ ಎಂದಿದ್ದಾರೆ.
ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಬದಲಾವಣೆಗಳಾಗಲಿವೆ ಎಂಬ ವಿಚಾರವಾಗಿ ಮಾತನಾಡಿ, ಬದಲಾವಣೆಗಳನ್ನು ಮಾಡಲು ಚುನಾವಣೆಯೇ ಆಗಬೇಕು ಅಂತೇನಿಲ್ಲ. ಬದಲಾವಣೆ ಮಾಡುವುದಾದರೆ ಹೈಕಮಾಂಡ್‌ನವರು ಮಾಡುತ್ತಾರೆ. ಸಿಎಂಗೆ ಆಗಲೀ, ಡಿಸಿಎಂಗೆ ಆಗಲೀ ಜವಾಬ್ದಾರಿ ಇದೆ. ಒಂದು ಕಡೆ ಪ್ರವಾಹ ಆಗುತ್ತಿದೆ, ಆ ಕಡೆ ಗಮನ ಕೊಡಬೇಕು. ಸಮಸ್ಯೆಗಳನ್ನು ಬಗೆಹರಿಸುವತ್ತ ನಾವು ಗಮನ ಕೊಡಬೇಕು. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ. ಆದರೆ ಈಗ ನಮ್ಮ ಆಧ್ಯತೆ ಏನು ಎಂದು ನೋಡಬೇಕು ಎಂದು ಹೇಳಿದ್ದಾರೆ.