ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ನಾಮಾ ಶಿಖರದ ಬಳಿ ಫೋಟೋ ತೆಗೆಯಲು ಹೋಗಿದ್ದ ಚಾರಣಿಗನೊಬ್ಬ, ತಾನಾಗಿಯೇ ಸುರಕ್ಷತಾ ಹಗ್ಗವನ್ನು ಬಿಚ್ಚಿ, ನಂತರ ಜಾರಿ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಸೆಪ್ಟೆಂಬರ್ 25 ರಂದು ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತ ಚಾರಣಿಗನನ್ನು 31 ವರ್ಷದ ಹಾಂಗ್ ಎಂದು ಗುರುತಿಸಲಾಗಿದೆ. ಆತ 18,332 ಅಡಿ (5,588 ಮೀಟರ್) ಎತ್ತರದ ನಾಮಾ ಪರ್ವತವನ್ನು ಏರುತ್ತಿದ್ದ ಚಾರಣಿಗರ ಗುಂಪಿನಲ್ಲಿದ್ದ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಿಖರದ ಸಮೀಪ ಹಿಮದಿಂದ ಆವೃತವಾದ ಇಳಿಜಾರಿನಲ್ಲಿ ಫೋಟೋ ತೆಗೆಯಲು ಹಾಂಗ್ ತನ್ನ ಸುರಕ್ಷತಾ ಹಗ್ಗವನ್ನು ತೆಗೆದಿದ್ದ. ಅಲ್ಲದೆ, ಆತ ಐಸ್ ಕೊಡಲಿಯನ್ನು (ice axe) ಕೂಡ ಬಳಸುತ್ತಿರಲಿಲ್ಲ.
“ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ದೃಶ್ಯ”
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಹಾಂಗ್ ಶಿಖರದ ಸಮೀಪ ಸುರಕ್ಷತಾ ಹಗ್ಗವಿಲ್ಲದೆ ನಿಂತಿರುವುದು ಕಂಡುಬರುತ್ತದೆ. ತನ್ನ ಸಮತೋಲನವನ್ನು ಸರಿಹೊಂದಿಸಲು ಪ್ರಯತ್ನಿಸುತ್ತಿದ್ದಾಗ, ಆತ ಜಾರಿಬಿದ್ದಿದ್ದಾನೆ. ಇದಾದ ಕ್ಷಣಮಾತ್ರದಲ್ಲಿ, ಸುಮಾರು 656 ಅಡಿ (200 ಮೀಟರ್) ಕೆಳಗೆ ಇಳಿಜಾರಿನಲ್ಲಿ ಜಾರಿಕೊಂಡು, ಕಣ್ಮರೆಯಾಗಿದ್ದಾನೆ. ಇದನ್ನು ಕಂಡ ಇತರ ಚಾರಣಿಗರು ಆಘಾತದಿಂದ ಕಿರುಚುವುದು ದೃಶ್ಯದಲ್ಲಿದೆ. ಹಗ್ಗವನ್ನು ಬಿಚ್ಚಿದ ನಂತರ ತನ್ನ ಕ್ರ್ಯಾಂಪಾನ್‌ಗಳಿಗೆ (ಹಿಮದ ಮೇಲೆ ನಡೆಯಲು ಬಳಸುವ ಬೂಟಿನ ಸಾಧನ) ಕಾಲು ತಗುಲಿ ಆತ ಬಿದ್ದಿರಬಹುದು ಎಂದು ಚೀನಾದ ಮಾಧ್ಯಮಗಳು ಅಂದಾಜಿಸಿವೆ.
“ಅನುಮತಿ ಇಲ್ಲದೆ ಚಾರಣ”
ಈ ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹಾಂಗ್ ಇದೇ ಮೊದಲ ಬಾರಿಗೆ ಈ ಪರ್ವತಕ್ಕೆ ಭೇಟಿ ನೀಡಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ. ಕಂಗ್‌ಡಿಂಗ್ ಮುನ್ಸಿಪಲ್ ಶಿಕ್ಷಣ ಮತ್ತು ಕ್ರೀಡಾ ಬ್ಯೂರೋದ ಅಧಿಕಾರಿಗಳ ಪ್ರಕಾರ, ಹಾಂಗ್ ಮತ್ತು ಆತನ ಗುಂಪು ಚಾರಣಕ್ಕೆ ಅಗತ್ಯವಾದ ಪರವಾನಗಿಗಳನ್ನು ಪಡೆದಿರಲಿಲ್ಲ ಮತ್ತು ತಮ್ಮ ಚಾರಣ ಯೋಜನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಅಪಘಾತದ ನಂತರ ಸ್ಥಳೀಯ ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಆತನನ್ನು ಉಳಿಸಲಾಗಲಿಲ್ಲ.
ಯಾವುದಿದು ನಾಮಾ ಪರ್ವತ?
ನಾಮಾ ಪರ್ವತವನ್ನು ನಾಮಾ ಶಿಖರ ಎಂದೂ ಕರೆಯಲಾಗುತ್ತದೆ. ಇದು ಸಿಚುವಾನ್ ಪ್ರಾಂತ್ಯದ ಪೂರ್ವ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿದ್ದು, ಗೊಂಗ್ಗಾ ಪರ್ವತ ಶ್ರೇಣಿಯ ಭಾಗವಾಗಿದೆ. ಈ ಪರ್ವತವನ್ನು ಏರಲು ಯೋಜಿಸುವವರು ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ. ಚಾರಣಿಗರು ಪರವಾನಗಿಗಳನ್ನು ಪಡೆಯಬೇಕು ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸಬೇಕು. ಸುರಕ್ಷತೆಗಾಗಿ ಸ್ಥಳೀಯ ಮಾರ್ಗದರ್ಶಿಗಳನ್ನು ನೇಮಿಸಿಕೊಳ್ಳುವುದು ಉತ್ತಮ. ಹಠಾತ್ ಹಿಮಪಾತ ಮತ್ತು ಶೀತ ತಾಪಮಾನಕ್ಕೆ ಸಿದ್ಧರಿರಬೇಕಾಗುತ್ತದೆ. ಇಲ್ಲಿ ಚಾರಣಿಗರು ಸಾಮಾನ್ಯವಾಗಿ 4,800 ಮೀಟರ್ ಎತ್ತರದಲ್ಲಿ ಬೇಸ್ ಕ್ಯಾಂಪ್ ಸ್ಥಾಪಿಸಿ, ನಂತರ ಶಿಖರವನ್ನು ಏರಲು ಪ್ರಯತ್ನಿಸುತ್ತಾರೆ.