ಅಬುಧಾಬಿ: ಹದಿನೈದು ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಫ್ರಿಕಾದ ರಾಜನೊಬ್ಬ ಇಡೀ ವಿಮಾನ ನಿಲ್ದಾಣವನ್ನೇ ತಾತ್ಕಾಲಿಕವಾಗಿ ಸ್ತಬ್ಧಗೊಳಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜನ ಅದ್ಧೂರಿ ಜೀವನಶೈಲಿಯ ಬಗ್ಗೆ ಜಾಗತಿಕವಾಗಿ ಚರ್ಚೆ ಆರಂಭವಾಗಿದೆ. ಅಲ್ಲದೇ, ಈ ಕಾಲದಲ್ಲೂ ಇದೆಲ್ಲಾ ಇದೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್‌ನಲ್ಲಿ ಬಂದು ಇಳಿದ ಈ ರಾಜ ಹಾಗೂ ಆತನ ಪರಿವಾರದ ದೃಶ್ಯಗಳು ಎಲ್ಲರಲ್ಲೂ ಕುತೂಹಲ ಮೂಡಿಸಿವೆ. ಅರ್ಧಂಬರ್ಧ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಈ ವ್ಯಕ್ತಿಗೆ ಸುತ್ತಲಿರುವವರು ತಲೆಬಾಗಿ ನಮಸ್ಕರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಯಾರು ಈ ರಾಜ?
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಬೇರಾರೂ ಅಲ್ಲ, ದಕ್ಷಿಣ ಆಫ್ರಿಕಾದಲ್ಲಿರುವ ಎಸ್ವಾಟಿನಿ (ಹಿಂದಿನ ಸ್ವಾಜಿಲ್ಯಾಂಡ್) ದೇಶದ ರಾಜ ಮೂರನೇ ಮ್ಸ್ವಾಟಿ. ಇವರು ಆಫ್ರಿಕಾದ ಕೊನೆಯ ಸಂಪೂರ್ಣ ರಾಜಪ್ರಭುತ್ವದ ಅರಸರಾಗಿದ್ದಾರೆ. ಜುಲೈ 10, 2025ರಂದು ಅವರ ಅಬುಧಾಬಿಗೆ ಭೇಟಿ ನೀಡಿದ್ದರು. ರಾಜ ಮೂರನೇ ಮ್ಸ್ವಾಟಿ ಅವರು ತಮ್ಮ 15 ಪತ್ನಿಯರು, 30 ಮಕ್ಕಳು ಮತ್ತು ಸುಮಾರು 100 ಸೇವಕರ ದಂಡಿನೊಂದಿಗೆ ಅಬುಧಾಬಿಗೆ ಬಂದಿಳಿದಿದ್ದರು. ಅವರ ಪರಿವಾರದ ಗಾತ್ರದಿಂದಾಗಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮೂರು ಟರ್ಮಿನಲ್‌ಗಳನ್ನು ಮುಚ್ಚಿ, ತಾತ್ಕಾಲಿಕ ಲಾಕ್‌ಡೌನ್ ಜಾರಿಗೊಳಿಸಬೇಕಾಯಿತು.

“ವಿಲಾಸಿ ಜೀವನ ಮತ್ತು ಟೀಕೆ”
ವರದಿಗಳ ಪ್ರಕಾರ, ರಾಜನ ಈ ಭೇಟಿಯ ಉದ್ದೇಶ ಯುಎಇಯೊಂದಿಗೆ ಆರ್ಥಿಕ ಒಪ್ಪಂದಗಳ ಕುರಿತು ಮಾತುಕತೆ ನಡೆಸುವುದು. ಆದರೆ, ಮಾತುಕತೆಗಿಂತ ಹೆಚ್ಚಾಗಿ ಅವರ ವೈಭೋಗದ ಜೀವನಶೈಲಿಯೇ ಜಾಗತಿಕ ಗಮನ ಸೆಳೆದಿದೆ. ವೈರಲ್ ಆಗಿರುವ ದೃಶ್ಯಗಳಲ್ಲಿ, ರಾಜ ಮ್ಸ್ವಾಟಿ ಚಿರತೆ ಚರ್ಮದ ಮಾದರಿಯ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದರೆ, ಅವರ ಪತ್ನಿಯರು ವರ್ಣರಂಜಿತ ಆಫ್ರಿಕನ್ ಉಡುಗೆಗಳಲ್ಲಿ ಕಂಗೊಳಿಸುತ್ತಿದ್ದರು. ರಾಜ ಮೂರನೇ ಮ್ಸ್ವಾಟಿ ವಿಶ್ವದ ಅತ್ಯಂತ ಶ್ರೀಮಂತ ದೊರೆಗಳಲ್ಲಿ ಒಬ್ಬರಾಗಿದ್ದು, ಅವರ ನಿವ್ವಳ ಮೌಲ್ಯ ಒಂದು ಶತಕೋಟಿ ಡಾಲರ್ ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
“ವಿವಾದಾತ್ಮಕ ಸಂಪ್ರದಾಯಗಳು”
ರಾಜ ಮ್ಸ್ವಾಟಿ ಪ್ರತಿ ವರ್ಷ ‘ರೀಡ್ ಡ್ಯಾನ್ಸ್’ ಎಂಬ ಸಾಂಪ್ರದಾಯಿಕ ಸಮಾರಂಭದಲ್ಲಿ ತಮಗಾಗಿ ಹೊಸ ವಧುವನ್ನು ಆಯ್ಕೆ ಮಾಡುತ್ತಾರೆ. ಈ ಪದ್ಧತಿಯು ಆಕರ್ಷಣೆಯ ಜೊತೆಗೆ ತೀವ್ರ ಟೀಕೆಗೂ ಗುರಿಯಾಗಿದೆ. ಒಂದೆಡೆ ರಾಜನು ಇಂತಹ ವೈಭೋಗದ ಜೀವನ ನಡೆಸುತ್ತಿದ್ದರೆ, ಮತ್ತೊಂದೆಡೆ ಎಸ್ವಾಟಿನಿ ದೇಶದ ಸುಮಾರು ಶೇ.60 ಜನಸಂಖ್ಯೆಯು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದೆ. ದೇಶದಲ್ಲಿ ವ್ಯಾಪಕವಾದ ಸಂಕಷ್ಟದ ನಡುವೆಯೂ ರಾಜನ ಅದ್ಧೂರಿ ಖರ್ಚು, ಐಷಾರಾಮಿ ಜೀವನದ ಬಗ್ಗೆ ಆಂತರಿಕವಾಗಿಯೂ ಟೀಕೆಗಳು ಹೆಚ್ಚುತ್ತಿವೆ. ಈ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಹರಿದಾಡುತ್ತಿದ್ದು, “ರಾಜನ ಪರಿವಾರವು ಇಡೀ ಹಳ್ಳಿಯಂತೆ ಕಾಣುತ್ತಿದೆ!” ಎಂದು ಅನೇಕರು ತಮಾಷೆ ಮಾಡಿದ್ದಾರೆ.