ನವದೆಹಲಿ : ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಮೊದಲ ಬಾರಿಗೆ ಅಕ್ಟೋಬರ್ 8ರಿಂದ 9ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭವಿಷ್ಯದಲ್ಲಿ ಭಾರತ ಮತ್ತು ಯುಕೆ ನಡುವಿನ ಪಾಲುದಾರಿಕೆ, ವ್ಯಾಪಾರ, ಭದ್ರತೆ ಕುರಿತು ಮಾತುಕತೆ ನಡೆಸಲಿದ್ದಾರೆ. ಹೀಗಾಗಿ ಇದೊಂದು ಮೌಲ್ಯಯುತ ಅವಕಾಶ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ.
ಯುಕೆ ಮತ್ತು ಭಾರತದ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಯೋಜನೆ ಹಾಕುತ್ತಿರುವ ಎರಡು ದೇಶಗಳು 2030ರ ವೇಳೆಗೆ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ, ಸುಂಕಗಳನ್ನು ಕಡಿತಗೊಳಿಸುವ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದು, ಕಳೆದ ಜುಲೈ ತಿಂಗಳಲ್ಲಿ ಮೋದಿ ಲಂಡನ್‌ಗೆ ಭೇಟಿ ನೀಡಿದ್ದರು. ಈ ವೇಳೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಎರಡು ದೇಶಗಳ ಪ್ರಧಾನಿಗಳು ‘ವಿಷನ್ 2035’ರ ಕುರಿತು ಮಾತುಕತೆ ನಡೆಸಲಿದ್ದು, ಇದರಲ್ಲಿ ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಮತ್ತು ಇಂಧನ, ಆರೋಗ್ಯ, ಶಿಕ್ಷಣ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ 10 ವರ್ಷಗಳ ಮಾರ್ಗಸೂಚಿಯ ಕುರಿತು ಪರಿಶೀಲನೆ ನಡೆಸಲಿದ್ದಾರೆ.