ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಕ್ಕೆ ಬಸವಣ್ಣ ಅವರ ಹೆಸರು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ವಿಶ್ವಗುರು ಬಸವಣ್ಣ ಅವರನ್ನು ʻಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿಧ್ಯದಲ್ಲಿ ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ 2 ಲಕ್ಷಕ್ಕೂ ಅಧಿಕ ಶರಣಾನುಯಾಯಿಗಳು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ, ಮುಂದಿನ ವರ್ಷದ ಒಳಗೆ ಅನುಭವ ಮಂಟಪದ ನಿರ್ಮಾಣ ಪೂರ್ತಿ ಮಾಡುತ್ತೇವೆ. ವಚನ ವಿವಿ ಮಾಡುವ ಬೇಡಿಕೆ ಕೊಟ್ಟಿದ್ದೀರಿ, ಮುಂದಿನ ವರ್ಷದಿಂದ ವಚನ ವಿಶ್ವವಿದ್ಯಾಲಯ ಮಾಡುತ್ತೇವೆ. ನಾನು ರಾಜಕೀಯದಲ್ಲಿ ಏನು ಮಾತು ಕೊಡುತ್ತೇನೋ, ಆ ಮಾತು ನಡೆಸಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ಸಿಎಂ ಭಾಷಣ ಮಾಡುವ ವೇಳೆಯೇ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡಲು ಆಗ್ರಹ ಕೇಳಿಬಂದಿತು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೆಟ್ರೋ ನಿಲ್ದಾಣಕ್ಕೆ ನಮ್ಮ ಪಾಲು ಜಾಸ್ತಿ ಇರಬಹುದು. ಆದರೆ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡುವುದು ನಮ್ಮ ಕೈಯಲ್ಲಿಲ್ಲ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಇದರ ಶಿಫಾರಸು ಮಾಡುತ್ತೇನೆ. ನಮ್ಮದೇ ಸರ್ಕಾರದ ವ್ಯಾಪ್ತಿಯಲ್ಲಿ ಇದ್ದಿದ್ದರೆ ಈ ಸ್ಥಳದಲ್ಲೇ ಒಪ್ಪಿಗೆ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.