ರಾಯಚೂರು: ಬೈಕ್ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಅಕ್ಕ- ತಮ್ಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಬಳಿ ನಡೆದಿದೆ.
ಮರಿಯಮ್ಮ(28), ಶೇಖರಪ್ಪ(25) ಮೃತ ಬೈಕ್ ಸವಾರರು.
ಘಟನೆಯಲ್ಲಿ ಪವಾಡ ಎಂಬಂತೆ ಎರಡು ವರ್ಷದ ಮಗು ಗೌತಮಿ ಬದುಕುಳಿದಿದ್ದು,ಸಣ್ಣಪುಟ್ಟ ಗಾಯಗಳಾಗಿವೆ. ಮಗುವನ್ನು ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ವೇಳೆ ಅತಿ ವೇಗವಾಗಿ ಎದುರುಗಡೆಯಿಂದ ಬಂದ ಕಾರೊಂದು ಭೀಕರವಾಗಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಬೈಕ್ ಹಿಂದಿದ್ದ ಇನ್ನೊಂದು ಕಾರಿಗೂ ಭಯಾನಕವಾಗಿ ಗುದ್ದಿ ಒಂದು ಪಲ್ಟಿಯಾಗಿ ಕರೆಂಟ್ ಕಂಬಕ್ಕೆ ರಭಸವಾಗಿ ಗುದ್ದಿ ಕಾರು ಛಿದ್ರವಾಗಿದ್ದು, ಕರೆಂಟ್ ಕಂಬ ನೆಲಕ್ಕೆ ಉರುಳಿದೆ.
ಕರೆಗುಡ್ಡ ಗ್ರಾಮದಲ್ಲಿ ಶನಿವಾರ ಜಾತ್ರೆ ಇದ್ದ ಹಿನ್ನಲೆ, ಕರೆಗುಡ್ಡ ಗ್ರಾಮದ ನಿವಾಸಿಯಾದ ಶೇಖರಪ್ಪ ತಮ್ಮ ಅಕ್ಕನನ್ನು ಮರಿಯಮ್ಮನ ಜಾತ್ರೆಗೆ ಕರೆದುಕೊಂಡಲು ಬರಲು ವಲ್ಕಂದಿನ್ನಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ಅಕ್ಕ ಹಾಗೂ ಅವರ ಎರಡು ವರ್ಷದ ಮಗಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಕರೆಗುಡ್ಡ ಗ್ರಾಮಕ್ಕೆ ಬರುತ್ತಿರುವಾಗ, ಕಾರೊಂದು ಇವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಇನ್ನೊಂದು ಕಾರ್ ಡಿಕ್ಕಿ ಹೊಡೆದಿದ್ದು, ಆ ಕಾರು ಪಲ್ಟಿಯಾಗಿದೆ. ಬೈಕ್ ಮೇಲಿಂದ ಸವಾರರು ಕೆಳಗೆ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾನವಿ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















