ದುಬೈ: ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ಶುಭಮನ್ ಗಿಲ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿ, ಅನುಭವಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತೀವ್ರ ಆಘಾತ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತದ ಏಕದಿನ ಮತ್ತು ಟಿ20 ತಂಡಗಳನ್ನು ಪ್ರಕಟಿಸಲಾಗಿತ್ತು. ಇದರಲ್ಲಿ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ, ಯುವ ಆಟಗಾರ ಶುಭಮನ್ ಗಿಲ್‌ಗೆ ಜವಾಬ್ದಾರಿ ವಹಿಸಲಾಗಿದೆ. ಈ ನಿರ್ಧಾರವು ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಹರ್ಭಜನ್ ಸಿಂಗ್ ಅವರು ತಮ್ಮ ಅಭಿಪ್ರಾಯವನ್ನು ಖಾರವಾಗಿ ಹಂಚಿಕೊಂಡಿದ್ದಾರೆ.
“ಗೌರವಯುತ ವಿದಾಯ ನೀಡಬೇಕಿತ್ತು”
ಈ ಕುರಿತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಹರ್ಭಜನ್, “ಮೊದಲನೆಯದಾಗಿ ಶುಭಮನ್ ಗಿಲ್‌ಗೆ ಅಭಿನಂದನೆಗಳು. ಟೆಸ್ಟ್ ತಂಡವನ್ನು ಅವರು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ, ಏಕದಿನ ನಾಯಕತ್ವ ಅವರಿಗೆ ಹೊಸ ಸವಾಲಾಗಲಿದೆ. ಆದರೆ, ರೋಹಿತ್ ಶರ್ಮಾ ನಾಯಕನಾಗಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಇದು ನಿಜಕ್ಕೂ ಆಘಾತಕಾರಿ,” ಎಂದು ಹೇಳಿದರು.
“ರೋಹಿತ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಈ ವರ್ಷ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅವರು ಭಾರತೀಯ ವೈಟ್-ಬಾಲ್ ಕ್ರಿಕೆಟ್‌ನ ಆಧಾರಸ್ತಂಭ. ಅವರಿಗೆ ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಯಕತ್ವ ನೀಡಿ, ಹೆಚ್ಚು ಗೌರವಯುತವಾಗಿ ನಾಯಕತ್ವದಿಂದ ಕೆಳಗಿಳಿಯಲು ಅವಕಾಶ ನೀಡಬೇಕಿತ್ತು,” ಎಂದು ಭಜ್ಜಿ ಪ್ರತಿಪಾದಿಸಿದರು.
“2027ರ ವಿಶ್ವಕಪ್‌ಗೆ ಈಗಲೇ ಚಿಂತೆ ಏಕೆ”?
ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಅವರು, “2027ರ ವಿಶ್ವಕಪ್‌ಗೆ ಇನ್ನೂ ಸಾಕಷ್ಟು ಸಮಯವಿದೆ. ಗಿಲ್ ಅವರು 6 ತಿಂಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾಯಬಹುದಿತ್ತು. ಈಗಲೇ ಈ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಗಿಲ್‌ಗೆ ನಾಯಕತ್ವ ಸಿಕ್ಕಿದ್ದು ನನಗೆ ಸಂತೋಷ ತಂದಿದೆ, ಆದರೆ ರೋಹಿತ್‌ಗೆ ಈ ಸ್ಥಾನ ತಪ್ಪಿದ್ದು ತೀವ್ರ ಬೇಸರ ಮೂಡಿಸಿದೆ,” ಎಂದು ಹರ್ಭಜನ್ ಸಿಂಗ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡ:
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಹರ್ಷಿತ್ ಸಿಂಗ್ ರಾಣಾ, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್.