ದೆಹಲಿ : ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಇಲ್ಲದವರಿಗೆ ಗುಡ್ ನ್ಯೂಸ್ ನೀಡಿದೆ. ನ.15ರಿಂದ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ದುಪ್ಪಟ್ಟು ಹಣ ಪಾವತಿಸಬೇಕಾಗಿಲ್ಲ. ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಇಲ್ಲದವರು ದುಪ್ಪಟ್ಟು ಹಣ ಪಾವತಿಸಬೇಕು ಎಂಬ ನಿಯಮವನ್ನು ಸಡಿಲಿಸಿದ್ದು, ನಗದು ರೂಪದಲ್ಲಿ ಪಾವತಿ ಆಯ್ಕೆ ಮಾಡಿಕೊಂಡರೆ ಟೋಲ್ ಶುಲ್ಕವನ್ನು ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಆದರೆ UPI ಮೂಲಕ ಪಾವತಿ ಮಾಡಿದರೆ ಶುಲ್ಕದ 1.25 ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008 ಅನ್ನು ತಿದ್ದುಪಡಿ ಮಾಡಿದ್ದು, FASTag ಇಲ್ಲದ ಬಳಕೆದಾರರಿಗೆ ಅವರ ಪಾವತಿ ವಿಧಾನವನ್ನು ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಿದೆ. ಈ ಕ್ರಮವು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮತ್ತು ಟೋಲ್ ಪ್ಲಾಜಾಗಳಲ್ಲಿ ನಗದು ಬಳಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಹೊಸ ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ ಇಲ್ಲದ ಅಥವಾ ದೋಷಯುಕ್ತ ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳು ಈಗ UPI ಬಳಸಿ ಪಾವತಿಸಿದರೆ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಬದಲು 1.25 ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ವಾಹನದ ಟೋಲ್ 100 ರೂ. ಆಗಿದ್ದರೆ, ಮೊದಲು ಫಾಸ್ಟ್‌ಟ್ಯಾಗ್ ಇಲ್ಲದವರು 200 ರೂ. ಪಾವತಿಸಬೇಕಿತ್ತು. ಆದರೆ ಈಗ ನೀವು UPI ಬಳಸಿ ಪಾವತಿಸಿದರೆ, 125 ರೂ. ಮಾತ್ರ ಪಾವತಿಸಬೇಕಾಗುತ್ತದೆ.