ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ RDX ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಕರ್ನಾಟಕ ಹೈಕೋರ್ಟ್ಗೂ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ ಮೇಲ್ ನಲ್ಲಿ ಬರೆದಿದ್ದಾನೆ ಎಂದು ತಿಳಿದು ಬಂದಿದೆ.
ಸೆ.22ರಂದು Cho_ramaswamy@hotmail ಎಂಬ ಐಡಿಯಿಂದ ಈ ಬಾಂಬ್ ಇ-ಮೇಲ್ ಬಂದಿದೆ. ಪೊಲೀಸರಿಗೆ ‘RAMASWAMY’ ಎಂಬ ಹೆಸರಿನಲ್ಲಿ ಬಂದ ಮೇಲ್ ದೊಡ್ಡ ತಲೆನೋವಾಗಿದ್ದು, ಇಮೇಲ್ ಮಾಡಿದ ‘ರಾಮಸ್ವಾಮಿ’ನ ಟ್ರೇಸ್ ಮಾಡುವುದಕ್ಕೆ ಪೊಲೀಸರು ಸದ್ಯ ಪರದಾಡುತ್ತಿದ್ದಾರೆ.

ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ RDX ಬ್ಲಾಸ್ಟ್ ಆಗುತ್ತೆ ಎಂದು ಬರೆಯಲಾಗಿತ್ತು. ರಿಸ್ಕ್ ತೆಗೆದುಕೊಳ್ಳದೆ ಪೊಲೀಸರು ಮೇಲ್ ಬಂದ ಬಳಿಕ ಸರ್ಚ್ ಆಪರೇಷನ್ ನಡೆಸಿದರು. ನಂತರ ಇದು ಹುಸಿಬಾಂಬ್ ಕರೆ ಎಂದು ಗೊತ್ತಾಗಿದೆ. ಬಳಿಕ ಸೈಬರ್ ಟೀಂ ಕೂಡಲೇ ಅಖಾಡಕ್ಕೆ ಇಳಿದಿದೆ.
ಹಾಟ್ ಮೇಲ್ಗೆ ಪತ್ರ ಬರೆದು ಪೊಲೀಸರು ಮಾಹಿತಿ ಕೇಳಿದ್ದಾರೆ. ಆದರೆ ಹಾಟ್ ಮೇಲ್ ನಿಂದ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ IP ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕಳೆದ 10 ದಿನಗಳಿಂದ ವಿಶೇಷ ತಂಡದಿಂದ ಹುಡುಕಾಟ ನಡೆದಿದ್ದು, ರಾಮಸ್ವಾಮಿ ಕಾಟಕ್ಕೆ ಫುಲ್ ಸ್ಟಾಪ್ ಇಡಲು ಪೊಲೀಸರು ಶತ ಪ್ರಯತ್ನ ಪಡುತ್ತಿದ್ದಾರೆ. ಈ ಸಂಬಂಧ ವಿಧಾನಸೌಧ ಹಾಗೂ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.