ಬೆಂಗಳೂರು:ಬಿಬಿಎಂಪಿ ಚುನಾವಣೆಯಲ್ಲಿ ನಾವು ಕನಿಷ್ಟ 50-60 ಸ್ಥಾನ ಗೆಲ್ಲಬೇಕಾಗಿದೆ. ಅದಕ್ಕಾಗಿ ಸಭೆ ನಡೆಸಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ, ನಾನು ಪಕ್ಷದ ಸಂಘಟನೆ ಮಾಡುತ್ತಿದ್ದೆನೆ. ಮಹಿಳಾ ವಿಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. 50 ಸಾವಿರ ಜನರನ್ನು ಸೇರಿಸುವ ಶಕ್ತಿ ನಮ್ಮಲ್ಲಿ ಇದೆ, ಅರಮನೆ ಮೈದಾನದಲ್ಲಿ ಸಮಾವೇಶ ಮಾಡುತ್ತೇವೆ. ಹೆಣ್ಣುಮಕ್ಕಳಿಗೆ ಚುನಾವಣೆಗೆ ಸ್ಪರ್ಧಿಸುವ ಶಕ್ತಿಯಿದೆ ಎನ್ನುವುದು ತಿಳಿಸಿಕೊಡಬೇಕಿದೆ ಎಂದು ತಿಳಿಸಿದ್ದಾರೆ.
ನಿಖಿಲ್ ಹೋದಾಗ ಜನ ಸೇರುತ್ತಾರೆ, ಆದರೆ ನಮ್ಮ ಶಕ್ತಿ ಪ್ರದರ್ಶನ ಆಗುವುದು ಚುನಾವಣೆ ಬಂದಾಗ. ಬೆಂಗಳೂರು ಸಿಟಿಯಲ್ಲಿ 50 ಸೀಟ್ ಆದರೂ ಗೆಲ್ಲುತ್ತೇನೆ ಎಂಬ ಸಂಕಲ್ಪ ಇದೆ
ಅ.12 ರಂದು ಅರಮನೆ ಮೈದಾನದಲ್ಲಿ ಜೆಡಿಎಸ್ ನಿಂದ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ನನ್ನದು, ನಿತ್ಯ ಕಚೇರಿಗೆ ಬಂದು ಸಭೆ ಮಾಡುತ್ತೇನೆ ಸಮಾವೇಶದ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದಿದ್ದಾರೆ.
ಇನ್ನೂ ಕುಮಾರಸ್ವಾಮಿ ಆರೋಗ್ಯ ಸಮಸ್ಯೆಯಲ್ಲಿದ್ದಾರೆ. ಆದ್ದರಿಂದ, ನಾಲ್ಕು ತಿಂಗಳಿಂದ ಯಾವುದೇ ರಾಜ್ಯದಲ್ಲಿ ಪ್ರವಾಸ ಮಾಡುತ್ತಿರಲ್ಲಿಲ್ಲ. ಪ್ರಸ್ತುತ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಹಾಗಾಗಿ, ಯಾವುದೇ ಸಮಸ್ಯೆ ಇಲ್ಲ, ಎಷ್ಟು ಬೇಕಾದರು ರಾಜಕೀಯದಲ್ಲಿ ಹೋರಾಡಲು ಸಮಸ್ಯೆ ಇಲ್ಲ ಎಂದು ವಿದೇಶದಿಂದ ಬಂದ ವೈದ್ಯರು ತಿಳಿಸಿದ್ದಾರೆ. ಇನ್ನು ಕೆಲ ದಿನಗಳ ಬಳಿಕ ಹೆಚ್ ಡಿ ಕೆ ಪ್ರವಾಸ ಆರಂಭಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.