ಬೆಂಗಳೂರು : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ನಾಳೆಯಿಂದ (ಅ.4) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದ್ದು, 17 ಸಾವಿರ ಗಣತಿದಾರರು ಮನೆ ಮನೆಗೆ ಬರಲಿದ್ದಾರೆ. ಸದ್ಯ ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿಯಷ್ಟು ಜನಸಂಖ್ಯೆ ಇದ್ದು, ಹೀಗಾಗಿ ನಗರದಲ್ಲಿ ಸಮೀಕ್ಷೆ ಕಾರ್ಯ ಪೂರ್ಣಕ್ಕೆ ಕನಿಷ್ಠ 2 ರಿಂದ 3 ತಿಂಗಳು ಬೇಕಾಗಲಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ ಹಿನ್ನೆಲೆ ಇಂದು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಅವರ ನೇತೃತ್ವದಲ್ಲಿ 17 ಸಾವಿರ ಗಣತಿದಾರರಿಗೆ ಅಂತಿಮ ಹಂತದ ತರಬೇತಿ ನೀಡಲು ತೀರ್ಮಾನಿಸಲಾಗಿದ್ದು, ನಾಳೆಯಿಂದ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಶುರು ಮಾಡಲಿದ್ದಾರೆ.
ಈ ಮೊದಲು ಜಿಬಿಎ ಸಮೀಕ್ಷೆಗೆ 22,700 ಸಿಬ್ಬಂದಿ ನೇಮಿಸಿತ್ತು. ಇದೀಗ ನಿವೃತ್ತಿ, ವರ್ಗಾವಣೆ, ನಿಧನ ಸೇರಿದಂತೆ ನಾನಾ ಕಾರಣದಿಂದ 17 ಸಾವಿರ ಸಿಬ್ಬಂದಿಗಳು ಗಣತಿಯಲ್ಲಿ ಭಾಗಿಯಾಗಲಿದ್ದಾರೆ.
ನಗರದಲ್ಲಿ ಒಟ್ಟು 45 ಲಕ್ಷ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದ್ದು, ಗಣತಿದಾರರಿಗೆ ತಲಾ 200 ರಿಂದ 300 ಮನೆ ಗಣತಿ ನಡೆಸುವಂತೆ ಸೂಚನೆ ನೀಡಲಾಗಿದೆ. ಗ್ರಾಮಾಂತರ ಪ್ರದೇಶದ ಗಣತಿದಾರರಿಗೆ ದಿನಕ್ಕೆ 10ರಂತೆ ಸುಮಾರು 150 ಮನೆ ಗಣತಿ ನಡೆಸುವ ಗುರಿ ನೀಡಲಾಗಿದೆ. ಹೀಗಿದ್ದರೂ ನಿಗದಿತ ಅವಧಿಯಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸುವುದಕ್ಕೆ ಕಷ್ಟವಾಗಲಿದ್ದು, ಸಮೀಕ್ಷೆ ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಸಮಯ ಬೇಕಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ನಿವಾಸಿಗಳು ಉದ್ಯೋಗಕ್ಕಾಗಿ ಮನೆಯಿಂದ ಹೊರಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಗಣತಿದಾರರಿಗೆ ಬೆಳಗ್ಗೆ, ಸಂಜೆ ಹಾಗೂ ರಜೆ ದಿನಗಳಲ್ಲಿ ಮಾತ್ರ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ, ಬೆಂಗಳೂರಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುವುದಕ್ಕೆ ಕನಿಷ್ಠ 2 ರಿಂದ 3 ತಿಂಗಳು ಬೇಕಾಗಲಿದೆ.