ಇಡೀ ವಿಶ್ವವೆ ಕಾತುರದಿಂದ ಕಾಯುತ್ತಿರವ ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್-1 ನಾಳೆ ( ಅ,1) ವಿಶ್ವಾದ್ಯಂತ 7ಕ್ಕೂ ಅಧಿಕ ಭಾಷೆಗಳಲ್ಲಿ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದ್ದು, ಇದು ಕೂಡ ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.
ಭರ್ಜರಿಯಾಗಿ ಕಾಂತಾರ1 ಕಟೌಟ್ ಸಿದ್ದವಾಗುತ್ತಿದ್ದು,ಬೆಂಗಳೂರಿನಲ್ಲಿ ರಿಷಬ್ ಶೆಟ್ಟಿ ಡೋಲು ಬಾರಿಸುತ್ತಿರುವ 90 ಕ್ಕೂ ಹೆಚ್ಚು ಕಟೌಟ್ ಗಳು ನಗರದಲ್ಲಿ ರೆಡಿಯಾಗಿದ್ದು, ಸಂತೋಷ ಚಿತ್ರಮಂದಿರದ ಬಳಿ 3D ಕಟೌಟ್ ತಲೆ ಎತ್ತಲಿದೆ. ಕಳೆದ ಇಪ್ಪತ್ತು ದಿನಗಳಿಂದ ಕಟೌಟ್ ಕೆಲಸ ನಡೆಯುತ್ತಿದ್ದು, ಇಂದು ರಾತ್ರಿ ಕಾಂತಾರ -1 ರಿಲೀಸ್ ಅಗುವ ಎಲ್ಲಾ ಚಿತ್ರಮಂದಿರಗಳಲ್ಲಿ ಕಟೌಟ್ ಗಳು ತಲೆ ಎತ್ತಲಿವೆ.

ಸಿನಿಮಾ ಬಿಡುಗಡೆ ಹಿನ್ನಲೆ ರಾಜ್ಯಾದಂತ ಭರದ ಸಿದ್ಧತೆ ನಡೆಯುತ್ತಿದ್ದು,ಕೋಟೆನಾಡು ಚಿತ್ರದುರ್ಗದ ಪ್ರಸನ್ನ, ಬಸವೇಶ್ವರ ಎರಡು ಥಿಯೇಟರಲ್ಲಿ ನಾಳೆ ಸಿನಿಮಾ ಪ್ರದರ್ಶನ ಕಾಣಲಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ ಥಿಯೇರ್ ಗಳಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಟೌಟ್ ಹಾಗೂ ಗೋಡೆಗಳ ಮೇಲೆ ಸಿನಿಮಾದ ಪೋಸ್ಟರ್, ಬ್ಯಾನರ್ ಕಟ್ಟಿದ್ದಾರೆ. ಎರಡೂ ಟಾಕೀಸ್‌ಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಿ ಪ್ರದರ್ಶನ ಕಾಣಲಿದೆ.

ಧಾರವಾಡದಲ್ಲಿ ನಾಳೆ ಕಾಂತಾರಾ ಚಿತ್ರ ಬಿಡುಗಡೆಗೆ ಸಂಗಮ ಹಾಗೂ ಐನಾಕ್ಸ್ ಚಿತ್ರ ಮಂದಿರಗಳು ಸಜ್ಜಾಗಿದ್ದು, ಚಿತ್ರ ಮಂದಿರದಲ್ಲಿ ಕಾಂತಾರಾ ಚಿತ್ರ ಕಟೌಟ್ ಹಾಗೂ ರಿಷಬ್ ಶೆಟ್ಟಿಯ ಕಟೌಟ್ ನಿರ್ಮಾಣ ಮಾಡಲಾಗಿದೆ. ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತರಾದಿಂದ ಕಾಯುತ್ತಿದ್ದಾರೆ.

ಕಾಂತಾರಾ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರವಾಗಿದ್ದು, ಹುಬ್ಬಳ್ಳಿಯಲ್ಲಿಯೂ ಭರದ ಸಿದ್ಧತೆ ನಡೆಯುತ್ತಿದೆ. ನಗರದ ಅಪ್ಸರಾ, ಸುಧಾ, ಸಿನಿ ಪೊಲೀಸ್, ಲಕ್ಷ್ಮಿ ಮತ್ತಿತರರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದ್ದು, ಈಗಾಗಲೇ ಬಹುತೇಕ ಟಿಕೇಟ್ ಸೋಲ್ಡ್ ಔಟ್ ಆಗಿವೆ.
ಅಪ್ಸರಾ ಟಾಕೀಸ್ ಬಳಿ ಬೃಹತ್ ಕಟೌಟ್, ಫ್ಲೆಕ್ಸ್ ಹಾಕಿ ಸಂಭ್ರಮ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು ಕಾಂತಾರಾದ ಅದ್ದೂರಿ ಸ್ವಾಗತಕ್ಕೆ ಸಕಲ ತಯಾರಿ ಮಾಡಿಕೊಂಡು ಚಿತ್ರದ ಬಗ್ಗೆ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

ಮೊದಲ ಸಿನೆಮಾಕ್ಕಿಂತ ಇದು ಅದ್ದೂರಿಯಾಗಿ ಇರಲಿದ್ದು, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಚಾರವಾಗಿದ ಕಾಂತಾರ ದೊಡ್ಡ ಮಟ್ಟದ ಯಶಸ್ಸು ಗಳಿಸಲಿದೆ ಎಂಬುದು ಹುಬ್ಬಳ್ಳಿ ಅಭಿಮಾನಿಗಳ ವಿಶ್ವಾಸವಾಗಿದೆ.