ನವದೆಹಲಿ: ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು ನೆರೆ ಸಂತ್ರಸ್ತರ ನೆರವಿಗೆ ಬನ್ನಿ. ತಕ್ಷಣವೇ ಕಲ್ಯಾಣ ಕರ್ನಾಟಕ್ಕೆ ನೆರೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಲ್ಯಾಣ ಕರ್ನಾಟಕದಲ್ಲಿ ನೆರೆ ಸಂಕಷ್ಟದಲ್ಲಿ ಜನರಿದ್ದರೆ ರಾಜ್ಯದಲ್ಲಿರುವ ಸರಕಾರ ʼಕುಂಭಕರ್ಣ ನಿದ್ರೆʼಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇಂದು ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಸರ್ಕಾರದ ವಿರುದ್ಧ ಟೀಕೆಗಳು ಶುರುವಾದ ಮೇಲೆ ಸಿಎಂ ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ವೈಮಾನಿಕ ವೀಕ್ಷಣೆ ಮಾಡಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ 3 ತಿಂಗಳಿಂದ ಈ ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಕುಮಾರಸ್ವಾಮಿ ಕಿಡಿಕಾರಿದರು.