ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗೆ ನಗರ ಸಜ್ಜಾಗುತ್ತಿದ್ದು, ಮಾರುಕಟ್ಟೆಗಳಲ್ಲಿ ವ್ಯಾಪಾರ ಬಿರುಸಾಗಿದೆ.
ನಗರದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮಡಿವಾಳ, ದಾಸದಹಳ್ಳಿ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿ ಮಾರುಕಟ್ಟೆಗಳು ಹೂವು-ಹಣ್ಣು, ಬೂದುಗುಂಬಳಕಾಯಿ, ಬಾಳೆಕಂದು, ನಿಂಬೆ ಹಾಗೂ ಪೂಜಾ ಸಾಮಗ್ರಿಗಳಿಂದ ತುಂಬಿ ಹೋಗಿವೆ. ಜತೆಗೆ ಕೆಲ ಹೂವಿನ ದರವೂ ಏರಿಕೆಯಾಗಿದೆ.
ಹಬ್ಬದ ದಿನವಾದ ಬುಧವಾರ ಮತ್ತು ಗುರುವಾರ ಸರ್ಕಾರಿ ರಜೆ ಇರುವುದರಿಂದ ಕೆಲವು ಕಚೇರಿಗಳು, ವ್ಯಾಪಾರಿ ಮಳಿಗೆ, ಗೋದಾಮು. ಫ್ಯಾಕ್ಟರಿ, ವಾಹನಗಳಿಗೆ ಮಂಗಳವಾರವೇ ಆಯುಧ ಪೂಜೆ ನೆರವೇರಿ ಸುವ ಸಾಧ್ಯತೆ ಇರುವುದರಿಂದ ಸೋಮವಾರವೇ ಖರೀದಿಯಲ್ಲಿ ತೊಡಗಿದ್ದರು.
“ಬೂದುಗುಂಬಳ ಬೆಳೆ ಹಾನಿ”
ಹಬ್ಬದಲ್ಲಿ ವಿಶೇಷವಾಗಿ ಅಂಗಡಿ, ಮನೆ, ವಾಹನಗಳು, ಕಚೇರಿಗಳೂ, ಕಾರ್ಖಾನೆಗಳಲ್ಲಿನ ಯಂತ್ರೋಪಕರಣಗಳು ಸೇರಿ ಎಲ್ಲ ವಸ್ತುಗಳಿಗೂ ಪೂಜೆ ಸಲ್ಲಿಸುವುದು ಆಯುಧ ಪೂಜೆಯ ವಿಶೇಷತೆ. ಆದರೆ ದಸರಾ ಹಬ್ಬಕ್ಕೆಂದು ತಮಿಳುನಾಡು, ಆಂಧ್ರಪ್ರದೇಶದಿಂದ ಬೂದಗುಂಬಳಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಈ ವರ್ಷ ಅಲ್ಲಿ ಮಳೆಯಿಂದಾಗಿ ಬೆಳೆ ಹಾಳಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಕಾಯಿ ಬರುತ್ತಿದೆ. ಕರ್ನಾಟಕದಲ್ಲೂ ಬೆಳೆಯಲಾಗಿದೆ. ಆದರೆ ಹಬ್ಬಕ್ಕೆ ಹೆಚ್ಚು ಬೇಡಿಕೆಯಿರುವುದರಿಂದ ಬೆಲೆ ಹೆಚ್ಚಳವಾಗಿದೆ.

ಸಗಟು ದರದಲ್ಲಿ ಕೆ.ಜಿ.ಗೆ 25-30 ರೂ. ದರ ಇದ್ದರೆ, ಚಿಲ್ಲರೆ ದರದಲ್ಲಿ ಒಂದು ಕೆ.ಜಿ. 40ರಿಂದ 60 ರೂ. ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರದಲ್ಲಿ ಕೆಲವರು ಕೆ.ಜಿ.ಗೆ ಬದಲಾಗಿ ಕಾಯಿಯ ಗಾತ್ರದ ಮೇಲೆ ಚಿಕ್ಕ ಕಾಯಿಗೆ 100-150, ದೊಡ್ಡ ಕಾಯಿಗೆ 200-250 ರೂ. ವರೆಗೂ ಮಾರಾಟ ಮಾಡುತ್ತಿದ್ದಾರೆ. ಹಬ್ಬದ ದಿನ ಬೆಲೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
“ದುಬಾರಿಯಾದ ಗುಲಾಬಿ”

ಈ ಬಾರಿ ಮಳೆ ಹಾಗೂ ರೋಗಬಾಧೆಯಿಂದ ಗುಲಾಬಿ ಬೆಳೆ ಹಾಳಾಗಿದ್ದು, ದರ ದುಬಾರಿಯಾಗಿದೆ. ಕೆ.ಜಿ. ಗುಲಾಬಿ ಹೂವು ಸಗಟು ದರದಲ್ಲಿ 250-300 ರೂ.ವರೆಗೆ ಇದ್ದರೆ, ಚಿಲ್ಲರೆ ದರದಲ್ಲಿ 400-450 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಸೇವಂತಿಗೆ ಹೂವು ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 200-250 ರೂ.ವರೆಗೆ ಮಾರಾಟ ಮಾಡುತ್ತಿದ್ದರೆ, ಚಿಲ್ಲರೆ ಮಾರಾಟಗಾರರು 300-350 ರೂ.ವರೆಗೆ ಮಾರುತ್ತಿದ್ದಾರೆ. ಚೆಂಡು ಹೂವು ದರವೂ ಇಳಿಕೆಯಾಗಿದೆ. ಕನಕಾಂಬರ, ಮಲ್ಲಿಗೆ, ಕಾಕಡ, ಸುಗಂಧ ರಾಜ ಹೂವುಗಳ ದರವೂ ಸ್ವಲ್ಪ ಏರಿಕೆಯಾಗಿವೆ.