ನ್ಯೂಯಾರ್ಕ್: ಅಮೆರಿಕದ ಮಿಚಿಗನ್‌ನಲ್ಲಿರುವ ಚರ್ಚ್ ಮೇಲೆ ಭೀಕರ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ದಾಳಿಕೋರ ತನ್ನ ವಾಹನವನ್ನು ಚರ್ಚ್‌ನ ಮುಂಭಾಗದ ಬಾಗಿಲಿಗೆ ನುಗ್ಗಿಸಿ, ಅಸಾಲ್ಟ್ ರೈಫಲ್‌ನಿಂದ ಮನಬಂದಂತೆ ಗುಂಡು ಹಾರಿಸಿ, ನಂತರ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾನೆ. ಕೊನೆಗೆ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ದಾಳಿಕೋರ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಡೆಟ್ರಾಯಿಟ್‌ನಿಂದ ಸುಮಾರು 50 ಮೈಲು ಉತ್ತರದಲ್ಲಿರುವ ಗ್ರಾಂಡ್ ಬ್ಲಾಂಕ್‌ನಲ್ಲಿರುವ ‘ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟೆರ್-ಡೇ ಸೇಂಟ್ಸ್’ನಲ್ಲಿ ನಡೆದಿದೆ. ದಾಳಿ ನಡೆದಾಗ ಚರ್ಚ್‌ನೊಳಗೆ ನೂರಾರು ಜನರು ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ.
ದಾಳಿಕೋರ ಇರಾಕ್ ಯುದ್ಧದ ಮಾಜಿ ಯೋಧ
ಪೊಲೀಸರು ದಾಳಿಕೋರನನ್ನು 40 ವರ್ಷದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂದು ಗುರುತಿಸಿದ್ದಾರೆ. ಆತ ಅಮೆರಿಕದ ನೌಕಾಪಡೆಯ ಮಾಜಿ ಯೋಧನಾಗಿದ್ದು, ಇರಾಕ್ ಯುದ್ಧದಲ್ಲಿ ಭಾಗವಹಿಸಿದ್ದ. ದಾಳಿಕೋರ ಉದ್ದೇಶಪೂರ್ವಕವಾಗಿಯೇ ಚರ್ಚ್‌ಗೆ ಬೆಂಕಿ ಹಚ್ಚಿದ್ದು, ಕಟ್ಟಡವು ಹೊಗೆ ಮತ್ತು ಜ್ವಾಲೆಯಿಂದ ಆವೃತವಾಗಿತ್ತು. “ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಅಲ್ಲಿ ಮತ್ತಷ್ಟು ಸಾವು ನೋವು ಸಂಭವಿಸಿರುವ ಸಾಧ್ಯತೆಯೂ ಇದೆ” ಎಂದು ಗ್ರಾಂಡ್ ಬ್ಲಾಂಕ್ ಟೌನ್‌ಶಿಪ್ ಪೊಲೀಸ್ ಮುಖ್ಯಸ್ಥ ವಿಲಿಯಂ ರೆನ್ಯೆ ಹೇಳಿದ್ದಾರೆ. ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ವರದಿಗಳ ಪ್ರಕಾರ, ಸ್ಯಾನ್‌ಫೋರ್ಡ್ 2004ರಿಂದ 2008 ರವರೆಗೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ, ಸಾರ್ಜೆಂಟ್ ಹುದ್ದೆಗೇರಿದ್ದ. 2007ರಲ್ಲಿ ‘ಆಪರೇಷನ್ ಇರಾಕಿ ಫ್ರೀಡಂ’ ಕಾರ್ಯಾಚರಣೆಯ ಭಾಗವಾಗಿ ಇರಾಕ್‌ಗೆ ನಿಯೋಜಿಸಲ್ಪಟ್ಟಿದ್ದ. ಮದುವೆಯಾಗಿದ್ದ ಸ್ಯಾನ್‌ಫೋರ್ಡ್‌ಗೆ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಮಗನಿದ್ದ. ಮಗನ ಚಿಕಿತ್ಸೆಗಾಗಿ ಹಣಕಾಸಿನ ತೊಂದರೆಯಲ್ಲಿದ್ದ ಕುಟುಂಬಕ್ಕೆ ಸಹಾಯ ಮಾಡಲು 2015 ರಲ್ಲಿ ‘ಗೋ ಫಂಡ್ ಮಿ’ ಅಭಿಯಾನವನ್ನು ಸಹ ನಡೆಸಲಾಗಿತ್ತು.
ಕ್ರಿಶ್ಚಿಯನ್ನರ ಮೇಲಿನ ಉದ್ದೇಶಿತ ದಾಳಿ ಎಂದ ಟ್ರಂಪ್ ಈ ಘಟನೆಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದನ್ನು “ಅಮೆರಿಕದಲ್ಲಿ ಕ್ರಿಶ್ಚಿಯನ್ನರ ಮೇಲಿನ ಮತ್ತೊಂದು ಉದ್ದೇಶಿತ ದಾಳಿ” ಎಂದು ಬಣ್ಣಿಸಿದ್ದಾರೆ. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಇದನ್ನು “ಭಯಾನಕ ದಾಳಿ” ಎಂದು ಕರೆದಿದ್ದಾರೆ. ಈ ದುರಂತದ ಬೆನ್ನಲ್ಲೇ ಸಮೀಪದ ಆಸ್ಪತ್ರೆಯ ಪ್ರತಿಭಟನಾನಿರತ ನರ್ಸ್‌ಗಳು ತಮ್ಮ ಮುಷ್ಕರವನ್ನು ಕೈಬಿಟ್ಟು ಗಾಯಾಳುಗಳಿಗೆ ಸಹಾಯ ಮಾಡಲು ಧಾವಿಸಿದ್ದಾರೆ