ಬೆಂಗಳೂರು: ಕರ್ನಾಟಕದಲ್ಲಿ ಜೀವ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವವರು ಹಾಗೂ ಇದೇ ವರ್ಷದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಬಯೋಕಾನ್ ಕಂಪನಿಯಿಂದ ಸ್ಕಾಲರ್ ಶಿಪ್ (Biocon Scholarship 2025) ಘೋಷಣೆ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸುವ ಮೂಲಕ ಸ್ಕಾಲರ್ ಶಿಪ್ ಪಡೆಯಬಹುದಾಗಿದೆ.
“ಯಾರೆಲ್ಲ ಅರ್ಹರು”?
ಬಯೋಟೆಕ್ನಾಲಜಿಯಲ್ಲಿ ಎಂ.ಟೆಕ್, ಬಯೋಟೆಕ್ನಾಲಜಿ, ಮೈಕ್ರೋ ಬಯಾಲಜಿಯಲ್ಲಿ ಎಂಎಸ್ಸಿ, ಎಂಎಸ್ ಕೋರ್ಸ್ ಗಳ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹಾಗೆಯೇ, ಇದೇ ವರ್ಷದಲ್ಲಿ ಕೋರ್ಸ್ ಮುಗಿಸಿದವರು ಕೂಡ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಒಟ್ಟು 15 ವಿದ್ಯಾರ್ಥಿನಿಯರಿಗೆ ಪ್ರಸಕ್ತ ವರ್ಷದಲ್ಲಿ ಸ್ಕಾಲರ್ ಶಿಪ್ ನೀಡಲಾಗುತ್ತಿದೆ.
ಕಳೆದ ವರ್ಷದ ಪರೀಕ್ಷೆಯಲ್ಲಿ ಶೇ.75ರಷ್ಟು ಅಂಕಗಳನ್ನು ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಕೋರ್ಸಿಗೆ ವ್ಯಯಿಸಿದ ಹಣದಲ್ಲಿ ಶೇ.60-75ರಷ್ಟು ಮೊತ್ತವನ್ನು ಸ್ಕಾಲರ್ ಶಿಪ್ ಆಗಿ ನೀಡಲಾಗುತ್ತದೆ. ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರ ಕುಟುಂಬದ ಆದಾಯವು ವಾರ್ಷಿಕ 6 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ. ಕರ್ನಾಟಕದ ವಿದ್ಯಾರ್ಥಿನಿಯರು ಮಾತ್ರ ಸ್ಕಾಲರ್ ಶಿಪ್ ಪಡೆಯಲು ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ https://indiabioscience.org/grants/biowise-2025 ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಗತ್ಯ ಶೈಕ್ಷಣಿಕ ದಾಖಲೆಗಳು, ವೈಯಕ್ತಿಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಅಪ್ಲೈ ಮಾಡಬೇಕು.