‘ದುಂಡು ಮಲ್ಲಿಗೆಯ ಮುಖದವಳು’ ಲೇಖಕಿ ಸರಜನಾ ಸೂರ್ಯ ಅವರ ಮೊದಲ ಕಥಾಸಂಕಲನ. ಇದರಲ್ಲಿ ಹತ್ತೊಂಬತ್ತು ಸುಂದರ ಕಥೆಗಳಿವೆ. ಮನಶ್ಶಾಸ್ತ್ರದಲ್ಲಿ ಎಂ.ಎ.ಮಾಡಿದ ಸೃಜನಾ ಅವರಿಗೆ ಅದೇ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಕುತೂಹಲ ಹುಟ್ಟಿಸುತ್ತ ಹೋಗುವ ಕಥೆಗಳನ್ನು ಬರೆಯುವುದು ಕಷ್ಟವೇನಲ್ಲ ಅನ್ನುವುದಕ್ಕೆ ಇಲ್ಲಿನ ಹಲವು ಕಥೆಗಳು ಸಾಕ್ಷಿಯಾಗಿವೆ. ಅಲ್ಲದೆ ಪಾತ್ರಗಳ ಒಳತೋಟಿಯನ್ನು ಗುರುತಿಸುವುದರಲ್ಲೂ ಅದು ಅವರಿಗೆ ಸಹಕಾರಿಯಾಗಿದೆ.
ಮೊದಲ ಕಥೆ ‘ ಮುಚ್ಚಿದ ಕಿಟಿಕಿ’ಯಲ್ಲಿ ಪೂಜಾ- ಸೀಮಾ ಅನ್ನುವ ಇಬ್ಬರು ಆತ್ಮೀಯ ಗೆಳತಿಯರು. ಇಬ್ಬರ ನಡುವಣ ಪ್ರೀತಿ ಅದೆಷ್ಟು ಗಾಢವಾಗಿದೆಯೆಂದರೆ ಸೀಮಾಗೆ ಪೂಜಾಳ ಜತೆಗೇ ಬದುಕು ಸಾಗಿಸೋಣ ಅನ್ನಿಸುತ್ತದೆ. ಆದರೆ ಹಿರಿಯರ ಮುಂದೆ ಹೇಳಿಕೊಳ್ಳುವ ಧೈರ್ಯವಾಗುವುದಿಲ್ಲ. ಹಾಗೆ ಸೀಮಾಳ ಮದುವೆ ನಿಶ್ಚಯವಾದಾಗ ಕೊನೆಯದಾಗಿ ಅವಳು ಪೂಜಾಳಲ್ಲಿ ಭವಿಷ್ಯದ ಬದುಕಿನ ಭರವಸೆ ಕೊಡಬಹುದೇ ಎಂದು ಕೇಳುತ್ತಾಳೆ. ಆದರೆ ಪೂಜಾ ಬೇಡವೆನ್ನುತ್ತಾಳೆ. ತನ್ನಂಥ ಸಲಿಂಗಿಗೆ ಮದುವೆಯಿಂದ ತೊಂದರೆಯಾದೀತು.ಆದರೆ ಸೀಮಾಳಂಥ ದ್ವಿಲಿಂಗಿಗೆ ಏನೂ ನಷ್ಟವಾಗಲಾರದು ಅನ್ನುತ್ತಾಳೆ. ಮದುವೆಯಾಗಿ ಬೆಂಗಳೂರಿಗೆ ಹೋಗಿ ನೆಲೆಯೂರುವ ಸೀಮಾ, ಕೆಲವು ವರ್ಷಗಳ ನಂತರ ಒಂದು ದಿನ ಅಕಸ್ಮಿಕವಾಗಿ ದಾರಿಯಲ್ಲಿ ಕಂಡ ಪೂಜಾ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಇದ್ದುದನ್ನು ಕಂಡು ಅಪರಾದಿ ಭಾವದಿಂದ ನಲುಗುತ್ತಾಳೆ.
‘ ಸುಖಾಂತ್ಯ ಬೇಕಾಗಿದೆ’ ಅನ್ನುವ ಕಥೆಯಲ್ಲೂ ಹೆಣ್ಣಿನ ತಂದೆಯ ಲಿಂಗತ್ವ ಸಮಸ್ಯೆಯೇ ಅವಳು ತನ್ನ ಪ್ರೇಮಿಯನ್ನು ದೂರ ಮಾಡಲು ಕಾರಣವಾಗುತ್ತದೆ. ವಿನಯಾ ಮತ್ತು ಭರತ್ ಬಾಲ್ಯ ಸ್ನೇಹಿತರಾಗಿದ್ದವರು ಮದುವೆಯಾಗಿ ಜತೆಗೆ ಬಾಳುವ ನಿರ್ಧಾರ ಮಾಡಿದರೂ ತಂದೆ-ತಾಯಿಯರ ನಡುವೆ ಉಂಟಾದ ಬಿರುಕಿನ ಅರಿವಾದಾಗ ಚಿಂತಾಕ್ರಾಂತಳಾದ ವಿನಯಾ ಭರತನಿಂದ ದೂರವಾಗುತ್ತಾಳೆ. ಆದರೆ ಕೆಲವು ವರ್ಷಗಳ ನಂತರ ತಾಯ್ತಂದೆಯರ ಸಮಸ್ಯೆಗೆ ಪರಿಹಾರ ಸಿಕ್ಕಿ ಅವರಿಬ್ಬರೂ ಒಂದಾದಾಗ ವಿನಯಾ ಪುನಃ ಭರತನನ್ನು ಬಯಸುತ್ತಾಳೆ. ಅದುತನಕವೂ ಅವಿವಾಹಿತನಾಗಿ ಉಳಿದಿದ್ದ ಬರತ್ ಕೊನೆಗೆ ಅವಳನ್ನು ಸೇರಿ ಕಥೆ ಸುಖಾಂತ್ಯವಾಗುತ್ತದೆ.
‘ಬೆನ್ನು ಬಿಡದ ಬೇತಾಳ’ ಕಥೆ ಅಪ್ಪ-ಮಗಳ ಸಂಬಂಧದ ಕುರಿತಾದದ್ದು. ಹೆಂಡತಿ ಸತ್ತ ನಂತರ ಮಗಳಿಗೋಸ್ಕರ ಎರಡನೆಯ ಮದುವೆ ಮಾಡಿಕೊಳ್ಳದೆ ಮಗಳನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ತಂದೆ ಪ್ರತಿದಿನವೆಂಬಂತೆ ತಲೆ ನೋವಿನಿಂದ ಒದ್ದಾಡುತ್ತ ಮಾತ್ರೆ ತೆಗೆದುಕೊಂಡಾಗ ಅವನ ಮೇಲೆ ಸದಾ ಸಿಲುಕುತ್ತಾಳೆ ಮಗಳು. ತಂದೆಯ ಕಷ್ಟವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಈ ಕಾರಣದಿಂದಾಗಿಯೇ ಅಪಾರವಾಗಿ ನೊಂದು ಅಪ್ಪನ ತಲೆನೋವು ಉಲ್ಬಣಿಸುತ್ತದೆ. ಡಾಕ್ಟರ್ ಪರೀಕ್ಷೆ ಮಾಡಿದರೆ ಎಲ್ಲವೂ ಸರಿಯಾಗಿದೆ. ಕೊನೆಗೆ ಡಾಕ್ಟರ್ ಅದು ಮನೋರೋಗವೆಂದೂ ,ಅವರು ಡಿಪ್ರೆಶನ್ ಗೆ ಹೋಗಿದ್ದಾರೆಂದೂ ಮನಶ್ಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಬೇಕೆಂದು ಹೇಳುತ್ತಾರೆ. ಆಗ ಮಗಳಿಗೆ ತನ್ನ ತಪ್ಪಿನ ಅರಿವಾಗುತ್ತದೆ.
‘ಬಸಿರು’ ಮತ್ತೆ ಮತ್ತೆ ಬಸಿರಾಗಿ ಮಗುವನ್ನು ಕಳೆದುಕೊಳ್ಳುವ ಮತ್ತು ಅತ್ತೆಯಿಂದಲೂ ಜನರಿಂದಲೂ ‘ ತಾಯಿಯಾಗದವಳು’ ಎಂದು ಹೀಗಳೆಯಿಸಿಕೊಳ್ಳುವ ಒಬ್ಬ ಸೂಕ್ಷ್ಮ ಮನಸ್ಸಿನ ಹೆಣ್ಣಿನ ನೋವನ್ನು ಕರುಳು ಕಿತ್ತು ಬರುವಂತೆ ಚಿತ್ರಿಸುತ್ತದೆ.ಸಂಕಲನದ ಒಂದು ಅತ್ಯುತ್ತಮ ಕಥೆಯಿದು.
ಸೃಜನಾ ಅವರು ಕಥೆಗಳಿಗೆ ಆಯ್ದುಕೊಳ್ಳುವ ವಸ್ತುಗಳು ಮತ್ತು ಕಥನಶೈಲಿಗಳು ಚೆನ್ನಾಗಿವೆ. ಕಥೆಗಳು ಮನೋಜ್ಞವಾಗಿವೆ. ಸಂಭಾಷಣೆಗಳಿಗೆ ಅವರು ಬಳಸುವ ಕುಂದಾಪುರ ಕನ್ನಡವು ಕಥೆಗಳ ಸೊಗಸಿಗೆ ಪೂರಕವಾಗಿದೆ. ಒಟ್ಟಿನಲ್ಲಿ ಒಬ್ಬ ಭರವಸೆಯ ಕಥೆಗಾರ್ತಿಯಾಗಿ ಈ ಕೃತಿಯ ಮೂಲಕ ಅವರು ಪ್ರಕಟವಾಗಿದ್ದಾರೆ ಎಂದು ಹೇಳಲು ಅಡ್ಡಿಯಿಲ್ಲ.

– ಡಾ. ಪಾರ್ವತಿ. ಜಿ. ಐತಾಳ್
ಸಾಹಿತಿಗಳು, ಖ್ಯಾತ ಅನುವಾದಕಿ
——————————————
ಕೃತಿಯ ಹೆಸರು : ದುಂಡು ಮಲ್ಲಿಗೆಯ ಮುಖದವಳು(ಸಣ್ಣ ಕಥೆಗಳು)
ಲೇ :ಸೃಜನಾ ಸೂರ್ಯ
ಪ್ರ.:ಗಗನ ಪ್ರಕಾಶನ, ಮೈಸೂರು