ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಟಿಡಿಪಿ ಶಾಸಕ ಹಾಗೂ ನಟ ನಂದಮೂರಿ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ‘ಸೈಕೋ’ ಎಂದು ಕರೆದಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಮೇಲಿನ ಚರ್ಚೆಯ ವೇಳೆ ಈ ಘಟನೆ ನಡೆದಿದೆ. ಈ ವಿವಾದದ ಬೆನ್ನಲ್ಲೇ ನಟ ಚಿರಂಜೀವಿ ವಿದೇಶದಿಂದಲೇ, ಚಲನಚಿತ್ರ ರಂಗದ ನಿಯೋಗದ ಭೇಟಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ವಿಧಾನಸಭೆಯಲ್ಲಿ ನಡೆದಿದ್ದೇನು?”
ಗುರುವಾರ ನಡೆದ ಕಲಾಪದಲ್ಲಿ, ಬಿಜೆಪಿ ಶಾಸಕ ಕಾಮಿನೇನಿ ಶ್ರೀನಿವಾಸ್ ಅವರು ಮಾತನಾಡುತ್ತಾ, ಈ ಹಿಂದೆ ನಟ ಚಿರಂಜೀವಿ ನೇತೃತ್ವದ ಚಲನಚಿತ್ರ ನಿಯೋಗವನ್ನು ಭೇಟಿಯಾಗಲು ಜಗನ್ ನಿರಾಕರಿಸಿದ್ದರು. ಮಾತನಾಡುವುದಿದ್ದರೆ ರಾಜ್ಯದ ಸಿನಿಮಾಟೋಗ್ರಫಿ ಸಚಿವರೊಂದಿಗೆ ಮಾತನಾಡುವಂತೆ ಸೂಚಿಸಿದ್ದರು. ಕೊನೆಗೆ ಚಿರಂಜೀವಿ ಅವರು ಪಟ್ಟು ಹಿಡಿದ ನಂತರವೇ ಜಗನ್ ಅವರನ್ನು ಭೇಟಿಯಾದರು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಬಿಜೆಪಿ ಶಾಸಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿ, “ಚಿರಂಜೀವಿ ಧ್ವನಿ ಎತ್ತಿ ಮಾತನಾಡಿದಾಗ ಅವರನ್ನು ಭೇಟಿಯಾಗಲು ಜಗನ್ ಬಂದರು ಎಂಬುದು ಸುಳ್ಳು. ಆ ಸೈಕೋ(ಜಗನ್) ಅವರನ್ನು ಭೇಟಿಯಾಗಲಿಲ್ಲ” ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಜಗನ್ ಅವರು ನಿಯೋಗದ ಭೇಟಿಗೆ ಸುತಾರಾಂ ಸಿದ್ಧರಿರಲಿಲ್ಲ. ನಿಯೋಗವು ಸಿನಿಮಾಟೋಗ್ರಫಿ ಸಚಿವ ಕಂಡುಲ ದುರ್ಗೇಶ್ ಅವರನ್ನು ಭೇಟಿಯಾದರೆ ಸಾಕು ಎಂದು ಬಯಸಿದ್ದರು ಎಂದು ಬಾಲಕೃಷ್ಣ ಪ್ರತಿಪಾದಿಸಿದರು.
“ಸಿಎಂ ಜಗನ್‌ರನ್ನು ಭೇಟಿಯಾಗಿದ್ದೆ: ಚಿರಂಜೀವಿ ಸ್ಪಷ್ಟನೆ”
ಈ ಚರ್ಚೆ ವಿವಾದದ ಸ್ವರೂಪ ಪಡೆದ ನಂತರ ನಟ ಚಿರಂಜೀವಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿವರವಾದ ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗದ ನಿರ್ಮಾಣ ವೆಚ್ಚ ಹೆಚ್ಚುತ್ತಿರುವ ಕಾರಣ, ಸಿನಿಮಾ ಟಿಕೆಟ್ ದರಗಳನ್ನು ಹೆಚ್ಚಿಸುವ ಕುರಿತು ಚರ್ಚಿಸಲು ರಾಜಮೌಳಿ, ಕೊರಟಾಲ ಶಿವ, ತ್ರಿವಿಕ್ರಮ್ ಶ್ರೀನಿವಾಸ್ ಸೇರಿದಂತೆ ಹಲವರು ತಮ್ಮನ್ನು ಸಂಪರ್ಕಿಸಿದ್ದರು. ನಂತರ ನಾನು ಅಂದಿನ ಸಿನಿಮಾಟೋಗ್ರಫಿ ಸಚಿವ ಪೆರ್ನಿ ನಾನಿ ಅವರೊಂದಿಗೆ ಮಾತನಾಡಿದೆ. ಅವರು ನಮ್ಮ ನಿಯೋಗವನ್ನು ಮುಖ್ಯಮಂತ್ರಿಗಳು ಭೇಟಿಯಾಗುತ್ತಾರೆ ಎಂದು ತಿಳಿಸಿದ್ದರು.
ಬಾಲಕೃಷ್ಣ ಅವರೊಂದಿಗೆ ಸಮನ್ವಯ ಸಾಧಿಸಲು ಹಲವು ಬಾರಿ ವಿಫಲವಾದ ನಂತರ, ತಾವು ವೈಯಕ್ತಿಕವಾಗಿ ಆರ್. ನಾರಾಯಣ ಮೂರ್ತಿ ಸೇರಿದಂತೆ ಸಣ್ಣ ತಂಡದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾದೆ ಎಂದು ಚಿರಂಜೀವಿ ಸ್ಪಷ್ಟಪಡಿಸಿದ್ದಾರೆ.
“ನನ್ನ ಈ ಪ್ರಯತ್ನದಿಂದಾಗಿಯೇ ಸರ್ಕಾರ ಟಿಕೆಟ್ ದರ ಏರಿಕೆಗೆ ಒಪ್ಪಿಗೆ ನೀಡಿತ್ತು. ಇದರಿಂದ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರಿಗೆ ಅನುಕೂಲವಾಯಿತು. ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ಇದಕ್ಕೆ ಸಾಕ್ಷಿ,” ಎಂದು ಚಿರಂಜೀವಿ ಹೇಳಿದ್ದಾರೆ.
ತಾವು ಯಾವಾಗಲೂ ಮುಖ್ಯಮಂತ್ರಿ ಮತ್ತು ಸಾರ್ವಜನಿಕರೊಂದಿಗೆ ಗೌರವಯುತವಾಗಿ ಸಂವಹನ ನಡೆಸುವುದಾಗಿ ಹೇಳಿರುವ ಅವರು, ಸದ್ಯ ವಿದೇಶದಲ್ಲಿರುವುದರಿಂದ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.