ವಾಷಿಂಗ್ಟನ್: ಭಾರತದ ಮೇಲೆ ಸುಂಕ, ವೀಸಾ ಪ್ರಹಾರ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧೀಯ ಉತ್ಪನ್ನಗಳ ಆಮದಿನ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದು ಭಾರತದ ಔಷಧೀಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಅಕ್ಟೋಬರ್ 1, 2025 ರಿಂದಲೇ ಜಾರಿಗೆ ಬರುವ ಈ ಹೊಸ ನೀತಿಯು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕಗಳನ್ನು ಸ್ಥಾಪಿಸದ ವಿದೇಶಿ ಕಂಪನಿಗಳನ್ನು ಗುರಿಯಾಗಿಸಿಕೊಂಡಿದೆ.
ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಡೊನಾಲ್ಡ್ ಟ್ರಂಪ್, “ಅಕ್ಟೋಬರ್ 1, 2025 ರಿಂದ, ಕಂಪನಿಗಳು ನಮ್ಮ ದೇಶದಲ್ಲೇ ಔಷಧ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿ. ಅಮೆರಿಕದಲ್ಲಿ ತಮ್ಮ ಔಷಧೀಯ ಉತ್ಪಾದನಾ ಘಟಕವನ್ನು ನಿರ್ಮಿಸದ ಹೊರತು, ಯಾವುದೇ ಬ್ರಾಂಡೆಡ್ ಅಥವಾ ಪೇಟೆಂಟ್ ಔಷಧೀಯ ಉತ್ಪನ್ನಗಳ ಮೇಲೆ ಶೇ.100 ಸುಂಕವನ್ನು ವಿಧಿಸಲಾಗುವುದು” ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯ ಆರಂಭಿಸಿದ (“ನೆಲ ಅಗೆಯುವುದು” ಅಥವಾ “ನಿರ್ಮಾಣ ಹಂತದಲ್ಲಿರುವುದು”) ಕಂಪನಿಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕ್ರಮವು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸರ್ಕಾರದ ಬಜೆಟ್ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಟ್ರಂಪ್ ಆಡಳಿತವು ವಿಶ್ವಾಸ ವ್ಯಕ್ತಪಡಿಸಿದೆ.
ಔಷಧಗಳ ಜೊತೆಗೆ, ಕಿಚನ್ ಕ್ಯಾಬಿನೆಟ್‌ಗಳು ಮತ್ತು ಬಾತ್‌ರೂಮ್ ವ್ಯಾನಿಟಿಗಳ ಮೇಲೆ ಶೇ.50, ಪೀಠೋಪಕರಣಗಳ ಮೇಲೆ ಶೇ.30 ಮತ್ತು ಭಾರಿ ಟ್ರಕ್‌ಗಳ ಮೇಲೆ ಶೇ.25 ಸುಂಕವನ್ನು ಸಹ ಟ್ರಂಪ್ ಘೋಷಿಸಿದ್ದಾರೆ.
“ರಾಷ್ಟ್ರೀಯ ಭದ್ರತೆ ಮತ್ತು ಇತರ ಕಾರಣಗಳಿಗಾಗಿ” ಈ ತೆರಿಗೆಗಳು ಅಗತ್ಯವೆಂದು ಅವರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
“ಭಾರತದ ಮೇಲೆ ಸಂಭಾವ್ಯ ಪರಿಣಾಮ”
ಭಾರತದ ಔಷಧೀಯ ಉತ್ಪನ್ನಗಳಿಗೆ ಅಮೆರಿಕವು ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದ್ದು, ಈ ಹೊಸ ಸುಂಕ ನೀತಿಯು ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಭಾರತೀಯ ಔಷಧೀಯ ರಫ್ತು ಉತ್ತೇಜನಾ ಮಂಡಳಿಯ (Pharmexcil) ಪ್ರಕಾರ, 2024ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು 27.9 ಬಿಲಿಯನ್ ಡಾಲರ್ ಮೌಲ್ಯದ ಔಷಧ ರಫ್ತಿನಲ್ಲಿ, 8.7 ಶತಕೋಟಿ ಡಾಲರ್ (ಶೇ. 31) ಮೌಲ್ಯದ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗಿವೆ.
ಅಮೆರಿಕದಲ್ಲಿ ಬಳಸಲಾಗುವ ಶೇ. 45ಕ್ಕಿಂತ ಹೆಚ್ಚು ಜೆನೆರಿಕ್ ಔಷಧಿಗಳನ್ನು ಮತ್ತು ಶೇ. 15ರಷ್ಟು ಬಯೋಸಿಮಿಲರ್ ಔಷಧಿಗಳನ್ನು ಭಾರತವೇ ಪೂರೈಸುತ್ತದೆ.
ಡಾ. ರೆಡ್ಡೀಸ್, ಝೈಡಸ್ ಲೈಫ್‌ಸೈನ್ಸಸ್, ಸನ್ ಫಾರ್ಮಾ ಮತ್ತು ಗ್ಲ್ಯಾಂಡ್ ಫಾರ್ಮಾದಂತಹ ಪ್ರಮುಖ ಭಾರತೀಯ ಕಂಪನಿಗಳು ತಮ್ಮ ಒಟ್ಟು ಆದಾಯದ ಶೇ. 30 ರಿಂದ 50ರಷ್ಟನ್ನು ಅಮೆರಿಕದ ಮಾರುಕಟ್ಟೆಯಿಂದಲೇ ಗಳಿಸುತ್ತವೆ.
ಹೊಸ ಸುಂಕವು ಮುಖ್ಯವಾಗಿ ಬ್ರಾಂಡೆಡ್ ಮತ್ತು ಪೇಟೆಂಟ್ ಔಷಧಿಗಳ ಮೇಲೆ ಗುರಿ ಇಟ್ಟಿದ್ದರೂ, ಭಾರತದಿಂದ ರಫ್ತಾಗುವ ವಿಶೇಷ ಜೆನೆರಿಕ್ ಔಷಧಿಗಳ ಮೇಲೂ ಇದು ಪರಿಣಾಮ ಬೀರಬಹುದೇ ಎಂಬ ಪ್ರಶ್ನೆ ಮೂಡಿಸಿದೆ.
ಈಗಾಗಲೇ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಟ್ರಂಪ್ ಶೇ. 50ರಷ್ಟು ಸುಂಕ ವಿಧಿಸಿದ್ದು, ಇದರಲ್ಲಿ ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಶೇ.25ರಷ್ಟು ‘ದಂಡ’ ಕೂಡ ಸೇರಿದೆ. ಈ ಹೊಸ ಕ್ರಮದಿಂದಾಗಿ ಭಾರತದ ಔಷಧೀಯ ಉದ್ಯಮಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.