ಹೈದರಾಬಾದ್: ಹೈದರಾಬಾದ್‌ನ ನರ್ಸಂಪಲ್ಲಿ ಗ್ರಾಮದಲ್ಲಿ, ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಯುವತಿಯನ್ನು ಆಕೆಯ ಪತಿಯ ಮನೆಯಿಂದ ಸ್ವಂತ ಕುಟುಂಬದವರೇ ಅಪಹರಣ ಮಾಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೀಸರ ಪೊಲೀಸರ ಪ್ರಕಾರ, ಯುವತಿಯ ಪೋಷಕರ ವಿರೋಧದ ನಡುವೆಯೂ ಈ ಜೋಡಿ ನಾಲ್ಕು ತಿಂಗಳ ಹಿಂದೆ ವಿವಾಹವಾಗಿತ್ತು. ವರನಿಗೆ “ಸರಿಯಾದ” ವೃತ್ತಿ ಇಲ್ಲ ಎಂಬ ಕಾರಣ ನೀಡಿ ಪೋಷಕರು ಇವರಿಬ್ಬರ ಮದುವೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಎರಡೂ ಕುಟುಂಬಗಳು ಒಂದೇ ಜಾತಿಗೆ ಸೇರಿದವರಾಗಿದ್ದು, ಸಂಬಂಧಿಕರೂ ಆಗಿದ್ದಾರೆ.
ಮದುವೆಯ ನಂತರ ದಂಪತಿ ಮನೆಗೆ ಹಿಂದಿರುಗಿದಾಗ, ಯುವತಿಯ ಪೋಷಕರು ಮತ್ತು ಸಂಬಂಧಿಕರು ಆಕೆಯ ಅತ್ತೆಯ ಮನೆಗೆ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ಯುವತಿಯನ್ನು ಮನೆಯಿಂದ ಹೊರಗೆಳೆದು ಕಾರಿಗೆ ಬಲವಂತವಾಗಿ ಹತ್ತಿಸಲಾಗಿದೆ.
ಈ ಸಂದರ್ಭದಲ್ಲಿ ತಮ್ಮ ಮೇಲೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಲಾಗಿದೆ ಎಂದು ಯುವತಿಯ ಪತಿ ಮತ್ತು ಅತ್ತೆ-ಮಾವ ಆರೋಪಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿ ಕಿರುಚುತ್ತಿರುವುದನ್ನು ನೋಡಿದ ಅಕ್ಕಪಕ್ಕದವರು ಸಹಾಯಕ್ಕೆ ಧಾವಿಸಲು ಪ್ರಯತ್ನಿಸಿದರೂ, ಆಕೆಯ ಪೋಷಕರು ಆಕೆಯನ್ನು ಎಳೆದುಕೊಂಡು ಹೋಗುವುದು ಕಂಡುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೀಸರ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ಮತ್ತು ಇತರ ನಾಲ್ವರು ಕುಟುಂಬ ಸದಸ್ಯರ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ನಂತರ, ಯುವತಿಯು ತಾನು ತನ್ನ ತಂದೆಯೊಂದಿಗೆ ಇರುವುದಾಗಿಯೂ ಮತ್ತು ಮರುದಿನ ಪೊಲೀಸ್ ಠಾಣೆಗೆ ಹಾಜರಾಗುವುದಾಗಿಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.



















