ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಈಗಾಗಲೇ ಆರಂಭಗೊಂಡಿದೆ. ಆದರೆ ಜಾತಿಗಣತಿಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬ ಉಲ್ಲೇಖಕ್ಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು. ಈ ನಿಟ್ಟಿನಲ್ಲಿ 48 ಹಿಂದು ಜಾತಿಗಳನ್ನು ಕ್ರಿಶ್ಚಿಯನ್ ಎಂದು ನಮೂದಿಸಿದ್ದನ್ನು ಕೈಬಿಡಲಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರ ನಿಯೋಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯ್ಕ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವಂತೆ ಆಗ್ರಹಿಸಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಸುನಿಲ್ ಕುಮಾರ್, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಎನ್.ಮಹೇಶ್ ಅವರಿದ್ದ ನಿಯೋಗದಿಂದ ಭೇಟಿಯಾಗಿ ಮನವಿ ಮಾಡಿದೆ. ಎಸ್‌ಸಿ ಉಪಜಾತಿಗಳ ಜೊತೆ ಕ್ರಿಶ್ಚಿಯನ್ ಹೆಸರು ಇರುವ 13 ಜಾತಿಗಳ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 13 ಹೆಸರುಗಳ ಜಾತಿ ಪಟ್ಟಿ ಸಮೀಕ್ಷೆಯಿಂದ ರದ್ದುಪಡಿಸಲು ಒತ್ತಾಯ ಮಾಡಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನೇ ಮಾಡಿತ್ತು. ಆಗ ಈ 15 ಕ್ರೈಸ್ತ SC ಜಾತಿಗಳು ಇರಲಿಲ್ಲ. ನ್ಯಾ.ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಪ್ರವರ್ಗಗಳ ರಚನೆಯಾಗಿ ಮೀಸಲಾತಿಯ ವರ್ಗೀಕರಣವಾಗಿದೆ. ಈಗ ನಿಮ್ಮ ಆಯೋಗದಿಂದ 15 ಹೊಸ ಕ್ರೈಸ್ತ SC ಜಾತಿಗಳ ಸೇರ್ಪಡೆಯಾಗಿ ಸಮೀಕ್ಷೆ ನಡೆದರೆ ದೊಡ್ಡ ಗೊಂದಲ ಉಂಟಾಗಿ ದತ್ತಾಂಶಗಳು ಏರುಪೇರಾಗುತ್ತದೆ. ಹೀಗಾಗಿ ನೀವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದೆ.

ಆನ್‌ಲೈನ್‌ನಲ್ಲಿ ಲಭ್ಯವಿರುವು ತಮ್ಮ ಆಯೋಗದ ಕೈಪಿಡಿಯಲ್ಲಿ ತಾವು ಈ ತಪ್ಪನ್ನು ಸರಿಪಡಿಸಿರುವುದು ನಿಜ ಆದರೆ ಸಮೀಕ್ಷೆಗೆ ಬಳಸುವ ಆಪ್‌ನಲ್ಲಿಯೂ ಈ 15 SC ಜಾತಿಗಳನ್ನು ಹೈಡ್ ಮಾಡಬೇಕು ಮತ್ತು ಅದನ್ನು ಸಾರ್ವಜನಿಕರ ಅವಗಾಹನೆಗೆ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಬಗ್ಗೆ ಆಯೋಗದ ಗೌರವಾನ್ವಿತ ಅಧ್ಯಕ್ಷರಾದ ತಾವು ತುರ್ತು ಗಮನಹರಿಸಬೇಕೆಂದು ಬಿಜೆಪಿ ನಿಯೋಗ ಆಯೋಗದ ಅಧ್ಯಕ್ಷರ ಮುಂದೆ ಮನವಿ ಸಲ್ಲಿಸಿದೆ. 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು, ಉಳಿದ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ, ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ ಎಂದು ಅಸಮಾಧಾನ ಹೊರಹಾಕಿದೆ.
ಆಯೋಗದ ಅಧ್ಯಕ್ಷ ಮಧುಸೂಧನ್ ನಾಯ್ಕ್‌ಗೆ ತರಾಟೆ..?
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಉಪಜಾತಿಗಳನ್ನ ಕ್ರಿಶ್ಚಿಯನ್‌ಗೆ ಟ್ಯಾಗ್ ಮಾಡಿದ್ದಕ್ಕೆ ಮಾಜಿ ಸಚಿವ ಎನ್.ಮಹೇಶ್, ಮಾಜಿ ಸಂಸದ ಮುನಿಸ್ವಾಮಿ ಆಕ್ರೋಶಗೊಂಡಿದ್ದರು. ಕ್ರಿಶ್ಚಿಯನ್ ಅನ್ನು ಹೇಗೆ ಇನ್ನೊಂದು ಧರ್ಮಕ್ಕೆ ಟ್ಯಾಗ್ ಮಾಡಿದ್ರಿ? ನಿಮ್ಮ ಉದ್ದೇಶವೇನು ಎಂದು ಇಬ್ಬರು ನಾಯಕರು ಕಿಡಿಕಾರಿದ್ದರಂತೆ. ಬಳಿಕ ಇಬ್ಬರನ್ನು ಛಲವಾದಿ ನಾರಾಯಣಸ್ವಾಮಿಯವರು ಸಮಾಧಾನಪಡಿಸಿದ್ದಾರೆಂದು ಹೇಳಲಾಗುತ್ತಿದೆ. ಆಯೋಗದ ಅಧ್ಯಕ್ಷರಿಗೆ ಬಿಜೆಪಿ ನಾಯಕರು ಲೋಪದೋಷಗಳನ್ನು ಸರಿಮಾಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ನಿಯೋಗದ ಮನವಿಗೆ ಸ್ಪಂದಿಸಿದ ಮಧುಸೂದನ್ ಅವರು ಸಮಸ್ಯೆ ಸರಿಪಡಿಸೋದಾಗಿ ಭರವಸೆ ನೀಡಿದ್ದಾರೆ.