ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಜಾತಿಗಣತಿ ಮಾಡುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರು ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಎಡಪಂಥೀಯ ವಿಚಾರಧಾರೆ ಇರುವವರನ್ನು ತಮ್ಮ ಜೊತೆ ಇಟ್ಟುಕೊಂಡಿದ್ದಾರೆ. ಅವರ ಜೊತೆ ಸೇರಿ ಹಿಂದೂ ಸಮಾಜವನ್ನು ಒಡೆಯೋ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಈ ಹಿಂದೆ ಲಿಂಗಾಯತ ವೀರಶೈವರನ್ನು ಒಡೆಯೋ ಕೆಲಸ ಸಿದ್ದರಾಮಯ್ಯನವರು ಮಾಡಿದ್ರು, ಈಗ ಮತ್ತೆ ಇಂತಹ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಅವರಿಗೆ ಮೂರ್ನಾಲ್ಕು ತಿಂಗಳಲ್ಲಿ ಅಧಿಕಾರ ಹೋಗುವ ಭಯವಿದೆ. ಹೀಗಾಗಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಮೆಚ್ಚಿಸೋ ಕೆಲಸ ಆರಂಭಿಸಿದ್ದಾರೆ.
ಲಿಂಗಾಯತ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್ ಸೇರಿದಂತೆ ಅನೇಕ ಜಾತಿ ಪಟ್ಟಿ ಮಾಡಿದ್ದಾರೆ. ಮತಾಂತರಕ್ಕೆ ಅನುಕೂಲವಾಗಲಿ ಎಂದು ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡುತ್ತಿದೆ. ಜನರ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಬಸವಣ್ಣನವರು ಎಂದಿಗೂ ಸನಾತನ ಧರ್ಮವನ್ನು ವಿರೋಧಿಸಿಲ್ಲ, ಪ್ರತ್ಯೇಕ ಲಿಂಗಾಯತ ಧರ್ಮ ಅನ್ನೋದು ಎಡಪಂಥೀಯರ ತಂತ್ರವಾಗಿದೆ. ಟೂಲ್ ಕಿಟ್ ರೀತಿ ಅವರು ಲಿಂಗಾಯತ ಸಮಾಜವನ್ನು ಒಡೆಯೋ ಕೆಲಸ ಮಾಡುತ್ತಿದ್ದಾರೆ. ಸಮಾಜದ ಬಾಂಧವರು ವೀರಶೈವ ಅಂತಾದ್ರೂ ಬರೆಸಬಹುದು ಇಲ್ಲವೇ ಲಿಂಗಾಯತ ಅಂತಾದ್ರೂ ಬರೆಸಬಹುದು. ಆದರೆ ಧರ್ಮದ ವಿಚಾರದಲ್ಲಿ ಮಾತ್ರ ಹಿಂದೂ ಅಂತ ಬರೆಸಬೇಕು ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮನವಿ ಮಾಡಿದ್ದಾರೆ