ಬೆಂಗಳೂರು: ಸಮುದಾಯಗಳ ತೀವ್ರ ಆಕ್ರೋಶಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಜಾತಿಗಣತಿ ನಮೂನೆಯಿಂದ ಹಿಂದೂ ಕ್ರೈಸ್ತಗೆ ಕೊಕ್ ನೀಡಿದೆ. ಕ್ರೈಸ್ತ ಜೊತೆ ನಾನಾ ಹಿಂದೂ ಜಾತಿ ಉಲ್ಲೇಖಕ್ಕೆ ಸಿದ್ದರಾಮಯ್ಯ ಸರ್ಕಾರ ಬ್ರೇಕ್ ಹಾಕಿದೆ.
ಹಲವು ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಜಾತಿಗಣತಿಯಿಂದ 33 ಜಾತಿಗಳನ್ನು ಪಟ್ಟಿಯಿಂದ ತೆಗೆದಿದೆ. ಸೋಮವಾರದಿಂದ ಸಮೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಗಣತಿದಾರರ ಅನುಕೂಲಕ್ಕೆ ಮಾತ್ರ 33 ಹಿಂದೂ ಜಾತಿಗಳನ್ನು ಪಟ್ಟಿಯಿಂದ ತೆಗೆಯಲು ನಿರ್ಧಾರ ಮಾಡಿದ್ದೇವೆಂದು ತಿಳಿಸಿದರು. ಜಾತಿಗಳ ಪಟ್ಟಿಯಿಂದ ಬೇರೆ ಯಾರಿಗೂ ಉಪಯೋಗವಿಲ್ಲ, ಶೀಘ್ರದಲ್ಲೇ ಐಡೆಂಟಿಫೈ ಮಾಡುವುದಕ್ಕೆ ಮಾತ್ರ ಅದು ಅನುಕೂಲ. ಜಾತಿಗಳ ವಿಚಾರದಲ್ಲಿ ಗೊಂದಲ ಸೃಷ್ಟಿಸೋದು ಅವಶ್ಯಕತೆ ಇರಲಿಲ್ಲ.

ಆಯೋಗದ ಅಧ್ಯಕ್ಷ ಮಧುಸೂದನ್ ಹೇಳಿದ್ದೇನು?
ಯಾರು ಯಾವ ಜಾತಿ ಬೇಕಾದರೂ ಬರೆಸಬಹುದು. 1,561 ಜಾತಿ ಬಿಟ್ಟು ಬೇರೆ ಯಾವುದೇ ಜಾತಿ ಇದ್ದರೂ ಮಾಹಿತಿ ಕೊಡಬಹುದು. ನಾನು ಜಾತಿ ಹೇಳುವುದಿಲ್ಲ ಎಂದರೂ ಅದಕ್ಕೂ ಅವಕಾಶವಿದೆ. ಇತರೇ ಅಂತಲೂ ಕಾಲಂ ಕೊಡಲಾಗಿದೆ. ಗೊಂದಲವಾಗಿರುವ ಜಾತಿಗಳ ಹೆಸರನ್ನು ತೆಗೆಯಲಾಗಿದೆ. ಕ್ರಿಶ್ಚಿಯನ್ ಒಕ್ಕಲಿಗ, ಲಿಂಗಾಯತ ಅಂತ ಜನರು ಇದ್ದರೆ ಬರೆಸಬಹುದು. ಡ್ರಾಪ್ ಔಟ್‌ನಿಂದ ಮಾತ್ರ ತೆಗೆಯಲಾಗಿದೆ. ಆದರೆ ಆ ಜಾತಿಗಳು ಇರಲಿವೆ. ಬರೆಯಲು ಇಚ್ಛೆ ಇರುವವರು ಬರೆಸಬಹುದು.
ಇದನ್ನು ಪಬ್ಲಿಕ್ ಮಾಡೋ ಅವಶ್ಯಕತೆ ಇಲ್ಲ. ಪ್ರಾಟೆಸ್ಟೆಂಟ್ ಕ್ರೈಸ್ತ, ಕ್ರೈಸ್ತಪ್ರಾಟೆಸ್ಟೆಂಟ್, ಸಿರಿಯನ್ ಕ್ರೈಸ್ತ, ಎಸ್‌ಸಿ ಮತಾಂತರ ಕ್ರೈಸ್ತವನ್ನು ಉಳಿಸಿದ್ದೇವೆ. ಇದನ್ನ ಹೊರತುಪಡಿಸಿ 33 ಜಾತಿ ತೆಗೆದಿದ್ದೇವೆ. ಬ್ರಾಹ್ಮಣ ಮುಸ್ಲಿಂ, ಜೈನ್, ಇದಕ್ಕೆ ವಿರೋಧ ಬರಲಿಲ್ಲ. ಅದಕ್ಕೆ ಅದನ್ನ ಮುಂದುವರಿಸಿದ್ದೇವೆ. ಯಾರು ಯಾವ ಜಾತಿ ಬೇಕಾದ್ರೂ ಬರೆಸಬಹುದು ಎಂದು ತಿಳಿಸಿದರು.
ಸಮೀಕ್ಷೆಯಾದ ಮೇಲೆ ತಜ್ಞರು ಎಲ್ಲಾ ಜಾತಿ ಮಾಹಿತಿ ಪಡೆದು ಯಾವ ಯಾವ ಕೆಟಗೆರಿಗೆ ಬರುತ್ತಾರೆ ಎಂದು ಪಟ್ಟಿ ಮಾಡುತ್ತಾರೆ. ಮತಾಂತರ ಆಗಿದ್ದರೆ ಮತಾಂತರ ಆದ ಧರ್ಮದಲ್ಲಿ ಅವರು ಇರುತ್ತಾರೆ. ಮತಾಂತರ ಆದವರು ಮೂಲ ಜಾತಿಗೆ ಬರುವುದಿಲ್ಲ. ಯಾವ ಜಾತಿ, ಧರ್ಮದ ಅಂಕಿ-ಅಂಶಗಳನ್ನು ಜಾಸ್ತಿ ಮಾಡುವುದಿಲ್ಲ. ಮತಾಂತರ ಆದವರಿಗೆ ಮತಾಂತರವಾದ ಧರ್ಮವೇ ಇರಲಿದೆ. ಮೂಲ ಜಾತಿ ಅವರಿಗೆ ಅನ್ವಯ ಆಗುವುದಿಲ್ಲ. ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು ನಮಗೂ ಸರ್ಕಾರಕ್ಕೂ ಸಂಬಂಧವಿಲ್ಲ. ನಿಯಮದ ಪ್ರಕಾರ ನಾವು ಸಮೀಕ್ಷೆ ಮಾಡುತ್ತೇವೆ ಎಂದು ಮಧುಸೂದನ್ ನಾಯ್ಕ್ ಅವರು ಹೇಳಿದ್ದಾರೆ